SK Home Ad
Home ನಮ್ಮ ಜಿಲ್ಲೆ ಮೈಸೂರು ದಸರಾದಲ್ಲಿ ಸ್ಯಾಂಡಲ್‌ವುಡ್ ಧಮಾಕ: 2 ದಿನ ಶೂಟಿಂಗ್ ಬಂದ್, ಅರಮನೆಯಲ್ಲಿ ತಾರೆಯರ ಮಿಂಚು!

ದಸರಾದಲ್ಲಿ ಸ್ಯಾಂಡಲ್‌ವುಡ್ ಧಮಾಕ: 2 ದಿನ ಶೂಟಿಂಗ್ ಬಂದ್, ಅರಮನೆಯಲ್ಲಿ ತಾರೆಯರ ಮಿಂಚು!

0
6

Bangalore: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ತಾಂತ್ರಿಕ ವರ್ಗ ಹಾಗೂ ನಿರ್ಮಾಪಕರು ಸಂಪೂರ್ಣವಾಗಿ ಸಾಥ್ ನೀಡಲಿದ್ದಾರೆ. ಈ ಬಾರಿ ಇಡೀ ಚಿತ್ರರಂಗವೇ ಒಗ್ಗಟ್ಟಾಗಿ ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ವಿಶೇಷ ಸಂಗತಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷೆ ಜಯಮಾಲಾ ಅವರು, “ಇತಿಹಾಸದಲ್ಲೇ ಮೊದಲ ಬಾರಿಗೆ ದಸರಾದಲ್ಲಿ ಕನ್ನಡ ಚಿತ್ರರಂಗ ಈ ಮಟ್ಟಿಗೆ ಭಾಗವಹಿಸುತ್ತಿದೆ” ಎಂದು ತಿಳಿಸಿದರು. ಈ ವಿಶೇಷ ಸಂದರ್ಭಕ್ಕಾಗಿ ಎರಡು ದಿನಗಳ ಕಾಲ ಸಿನಿಮಾಗಳ ಚಿತ್ರೀಕರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಚಿತ್ರರಂಗ ನಡೆದುಬಂದ ಸುವರ್ಣ ಹಾದಿಯನ್ನು ಎಲ್‌ಇಡಿ (LED) ಪರದೆಗಳ ಮೂಲಕ ಹಾಗೂ ಪ್ರತ್ಯೇಕ ಬಸ್‌ಗಳ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಈ ಯೋಜನೆಯ ಸಮಗ್ರ ಉಸ್ತುವಾರಿಯನ್ನು ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ವಹಿಸಿಕೊಂಡಿದ್ದಾರೆ.

416ನೇ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರಿಗಾಗಿ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಅರಮನೆ ಆವರಣದಲ್ಲಿ 150ಕ್ಕೂ ಹೆಚ್ಚು ಪ್ರಮುಖ ಕಲಾವಿದರಿಗೆ ವಿಶೇಷ ಆಸನ ಕಾಯ್ದಿರಿಸಲಾಗಿದೆ. ಮೈಸೂರಿಗೆ ಆಗಮಿಸುವ ಲಕ್ಷಾಂತರ ಜನಸ್ತೋಮ ಹಾಗೂ ತಾರೆಯರ ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಮಧ್ಯೆ, ಕಳೆದ 45 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಚಲನಚಿತ್ರೋತ್ಸವದ ಬದಲು ಕಲಾವಿದರಿಗೆ ನೆರವಾಗಲು ಸಹಾಯಧನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಹಿರಿಯ ನಟ ಅನಂತ್ ನಾಗ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಆಶಯವೂ ವ್ಯಕ್ತವಾಗಿದೆ ಎಂದು ಸಾ.ರಾ. ಗೋವಿಂದು ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ತಾರೆಯರು ಹಾಗೂ ತಾಂತ್ರಿಕ ವರ್ಗವನ್ನು ವೈಯಕ್ತಿಕವಾಗಿ ಆಹ್ವಾನಿಸಲಾಗುತ್ತಿದ್ದು, ಸರ್ಕಾರದ ಈ ನಡೆಗೆ ವಾಣಿಜ್ಯ ಮಂಡಳಿ ಧನ್ಯವಾದ ಸಲ್ಲಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಎಂ.ಜಿ. ರಾಮಮೂರ್ತಿ, ಸುಂದರರಾಜ್, ಕೆ. ಮಂಜು, ಭಾ.ಮ. ಹರೀಶ್, ದೊಡ್ಡಣ್ಣ ಹಾಗೂ ಎ. ಗಣೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.