ಮಂಡ್ಯ: ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿದ್ದ ನಾಲ್ವರು ಸೇರಿದಂತೆ ಒಟ್ಟು ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮುತ್ತತ್ತಿ ಸಮೀಪದ ಕಾವೇರಿ ನದಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮೃತರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (52), ಅವರ ಮಗಳು ಪ್ರಿಯಾಂಕ ಮತ್ತು ಶ್ವೇತಾ (38), ಮತ್ತೋರ್ವ ಮಗಳು ಚೈತ್ರಾ (20) ಹಾಗೂ ಕಾರು ಚಾಲಕ ಮಹೇಶ್ (30) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಕುಟುಂಬದ ಏಳು ಮಂದಿ ಕಬ್ಬಾಳು ದೇವಸ್ಥಾನದಲ್ಲಿ ಬೀಗರ ಔತಣಕೂಟದ ನಿಮಿತ್ತ ಆಗಮಿಸಿ ಪೂಜೆ ಸಲ್ಲಿಸಿದ್ದರು. ಬಳಿಕ ಮಳವಳ್ಳಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ನಂತರ ಕಾವೇರಿ ನದಿಯ ದಡದಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ವಿಜಯಮ್ಮ ಅವರ ಕಾಲು ಜಾರಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ.
ಅವರನ್ನು ರಕ್ಷಿಸಲು ಮಗಳು ಸೇರಿದಂತೆ ಕುಟುಂಬದ ಇತರ ಸದಸ್ಯರು ನೀರಿಗೆ ಇಳಿದಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಿದ್ದರಿಂದ ಅವರು ಸಹ ಕೊಚ್ಚಿಹೋಗಿದ್ದಾರೆ. ಈ ದೃಶ್ಯ ಕಂಡ ಕಾರು ಚಾಲಕ ಮಹೇಶ್ ಕೂಡ ರಕ್ಷಣೆಗೆ ಧಾವಿಸಿದ್ದು, ದುರದೃಷ್ಟವಶಾತ್ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಗು ಸೇರಿದಂತೆ ಇಬ್ಬರು ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ನುರಿತ ಈಜುಗಾರರು ಶೋಧ ಕಾರ್ಯಾಚರಣೆ ನಡೆಸಿದರು. ನೀರಿನಲ್ಲಿ ಮುಳುಗಿದ್ದ ಐವರ ಮೃತದೇಹಗಳನ್ನು ರಾತ್ರಿ ಸುಮಾರು 7 ಗಂಟೆ ವೇಳೆಗೆ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.






















