SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಗ್ಯಾಸ್ ಸೋರಿಕೆ: ಸಮಯಪ್ರಜ್ಞೆಯಿಂದ 150 ವಿದ್ಯಾರ್ಥಿಗಳು ಸುರಕ್ಷಿತ

ಗ್ಯಾಸ್ ಸೋರಿಕೆ: ಸಮಯಪ್ರಜ್ಞೆಯಿಂದ 150 ವಿದ್ಯಾರ್ಥಿಗಳು ಸುರಕ್ಷಿತ

0
2

ಕೊಪ್ಪಳ: ಕೊಪ್ಪಳದ ಬಹಾರಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳಿಗ್ಗೆ ಬಿಸಿಯೂಟ ತಯಾರಿಸುವ ವೇಳೆ ಗ್ಯಾಸ್ ಸೋರಿಕೆಯಿಂದ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ.

ಸ್ಥಳೀಯರ ಸಮಯಪ್ರಜ್ಞೆಯಿಂದ ಬೆಂಕಿಯನ್ನು ತಕ್ಷಣ ನಿಯಂತ್ರಣಕ್ಕೆ ತರಲಾಗಿದ್ದು, ಶಾಲೆಯ ಸುಮಾರು 150 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಸಿಯೂಟ ತಯಾರಿಸುವ ವೇಳೆ ಗ್ಯಾಸ್ ಪೈಪ್‌ನಿಂದ ಸೋರಿಕೆ ಉಂಟಾಗಿ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಗಮನಿಸಿದ ವಿದ್ಯಾರ್ಥಿನಿಯೊಬ್ಬಳ ತಾಯಿ ಜೋರಾಗಿ ಕೂಗಿ ಸ್ಥಳೀಯರನ್ನು ಎಚ್ಚರಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಬೆಂಕಿ ನಂದಿಸಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಸಿಯೂಟ ತಯಾರಕಿಯ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ. ಬಿಸಿಯೂಟ ತಯಾರಕಿ ಪ್ರತಿದಿನ ತಡವಾಗಿ ಶಾಲೆಗೆ ಆಗಮಿಸುತ್ತಾರೆ. ಮಂಗಳವಾರವೂ ತಡವಾಗಿ ಬಂದು ಅವಸರದಲ್ಲಿ ಒಲೆ ಉರಿಸುವಾಗ ಗ್ಯಾಸ್ ಪೈಪ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ದೂರಿದರು.

ಅಲ್ಲದೆ, ಘಟನೆಯ ಕುರಿತು ಬಿಸಿಯೂಟ ತಯಾರಕಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರನ್ನು ಪಾಲಕರು ತರಾಟೆಗೆ ತೆಗೆದುಕೊಂಡರು. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.