ಕುಷ್ಟಗಿ: ನಿಡಶೇಸಿ ಗೆಜ್ಜೆಬಾವಿ ಪಶ್ಚಿಮಕಾಂತಿ ಹಿರೇಮಠ ಪೀಠ ಹಾಗೂ ಕುಷ್ಟಗಿ ಕಲ್ಮಠದ ಹಿರಿಯ ಶ್ರೀಗಳಾಗಿ ಐದು ದಶಕಗಳ ಕಾಲ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದ ಚನ್ನಬಸವೇಶ್ವರ ಸ್ವಾಮೀಜಿ (79) ಮಂಗಳವಾರ ಬೆಳಗಿನಜಾವ ಲಿಂಗೈಕ್ಯರಾದರು.
ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಿಡಶೇಸಿ ಶ್ರೀಮಠಕ್ಕೆ ಕರೆತರಲಾಗಿತ್ತು. ಆದರೆ, ಮಂಗಳವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಕೊಪ್ಪಳ ಹಾಗೂ ರಾಯಚೂರು ಸೇರಿದಂತೆ ನಾಡಿನ ವಿವಿಧೆಡೆ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಚನ್ನಬಸವೇಶ್ವರ ಮಹಾಸ್ವಾಮೀಜಿ ಅವರು ಭಕ್ತರ ಪಾಲಿಗೆ ಕೇವಲ ಮಠಾಧೀಶರಾಗಿರಲಿಲ್ಲ, ಆಧ್ಯಾತ್ಮಿಕ ಮಾರ್ಗದರ್ಶಿ, ಸಮಾಜದ ಹಿರಿಯ ಹಾಗೂ ಸಂಕಷ್ಟದಲ್ಲಿದ್ದವರಿಗೆ ಸಾಂತ್ವನದ ಆಶ್ರಯದಾತರಾಗಿದ್ದರು. ಐದು ದಶಕದಿಂದ ಮಠದ ಪರಂಪರೆ, ಧರ್ಮದ ತತ್ವ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮುಂದುವರಿಸಿದ ಶ್ರೀಗಳು ತಮ್ಮ ಸರಳತೆ, ಸಾತ್ವಿಕತೆ ಹಾಗೂ ಸೇವಾ ಮನೋಭಾವದಿಂದ ಭಕ್ತರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು.
ಲಿಂಗೈಕ್ಯ ಶ್ರೀಗಳ ಕ್ರಿಯಾ ಸಮಾಧಿ ಮಂಗಳವಾರ ನಿಡಶೇಸಿ ಶ್ರೀಮಠದ ಆವರಣದಲ್ಲಿ ಅಭಿನವ ಕರಿಬಸವ ಶಿವಾರ್ಯಚಾರ್ಯರ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು, ಗಣ್ಯರು ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ವೀರಶೈವ ಜಂಗಮ ಧರ್ಮದ ವಿಧಿ ವಿಧಾನಗಳ ಅನುಸಾರ ನೆರವೇರಿತು.






















