SK Home Ad
Home ನಮ್ಮ ಜಿಲ್ಲೆ ಗದಗ ಬರದ ಬೇಗೆಗೆ ಬಂದ್ ಬಿಸಿ; ರೈತರ ಹೋರಾಟಕ್ಕೆ ನರಗುಂದ ಸ್ತಬ್ಧ!

ಬರದ ಬೇಗೆಗೆ ಬಂದ್ ಬಿಸಿ; ರೈತರ ಹೋರಾಟಕ್ಕೆ ನರಗುಂದ ಸ್ತಬ್ಧ!

0
9

ನರಗುಂದ: ತೀವ್ರ ಮಳೆ ಕೊರತೆಯಿಂದ ಭೀಕರ ಬರಗಾಲ ಪರಿಸ್ಥಿತಿಗೆ ರೈತ ಸಮೂಹ ಕಂಗಾಲಾದ ಹಿನ್ನೆಲೆಯಲ್ಲಿ ಬರ ಘೋಷಣೆಗಾಗಿ ರೈತ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ನರಗುಂದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹದಾಯಿ ಮಹಾವೇದಿಕೆ ಆಶ್ರಯದಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ಹಾಕಿ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲಿಸುವ ಮೂಲಕ ಬಂದ್ ಯಶಸ್ವಿಗೊಳಿಸಿದರು.

ಪಟ್ಟಣ ಸೇರುವ ಪ್ರಮುಖ ಮಾರ್ಗಗಳಾದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಸವದತ್ತಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಯಾವುದೇ ವಾಹನಗಳು ನಗರದೊಳಗೆ ಪ್ರವೇಶ ನಿರ್ಬಂಧವಾಗಿತ್ತು. ಇದರಿಂದ ದಿನವಿಡೀ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಪಟ್ಟಣದ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಬೀಕೊ ಎನ್ನುತ್ತಿದ್ದವು. ಮಾರುಕಟ್ಟೆ ಪ್ರದೇಶ ಸಂಪೂರ್ಣ ಬಂದ್ ಆಗಿದ್ದರಿಂದ ಹಾಗೂ ಎಲ್ಲ ವಾಹನಗಳ, ಜನರ ಸಂಚಾರವಿಲ್ಲದೆ ಪಟ್ಟಣದ ಮಾರುಕಟ್ಟೆ ಪ್ರದೇಶದ ಎಲ್ಲ ರಸ್ತೆಗಳು ಬೀಕೊ ಎನ್ನುತ್ತಿದ್ದವು.

ಸಾರಿಗೆ ಸಂಸ್ಥೆ ಎಲ್ಲ ಬಸ್‌ಗಳ ಸಂಚಾರ ಮೊಟಕುಗೊಳಿಸಿದ್ದರಿಂದ ದಿನವಿಡೀ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತಿದ್ದ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಿಗ್ಗೆಯೆ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಪರವೂರಿಗೆ ತೆರಳಬೇಕಾದ ಸಾರ್ವಜನಿಕರು ನಗರದ ಹೊರವಲಯದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಖಾಸಗಿ ವಾಹನಗಳಿಂದ ತಮ್ಮ ಊರು ಸೇರುವುದು ಕಂಡು ಬಂದಿತು. ನರಗುಂದ ಬಂದ್ ಇಂದು ಶಾಂತಿಯುತವಾಗಿತ್ತು. ಪಟ್ಟಣದ ಎಲ್ಲ ಕಡೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.