SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಇಸ್ಲಾಂ ಧರ್ಮ ಶ್ರೇಷ್ಠ, ಹಜ್‌ ಯಾತ್ರೆಗೆ ಹೋಗುವ ಆಸೆಯಿದೆ: ರಾಯರಡ್ಡಿ

ಇಸ್ಲಾಂ ಧರ್ಮ ಶ್ರೇಷ್ಠ, ಹಜ್‌ ಯಾತ್ರೆಗೆ ಹೋಗುವ ಆಸೆಯಿದೆ: ರಾಯರಡ್ಡಿ

0
37

ಕೊಪ್ಪಳ: ಬೇರೆ ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠವಾಗಿದೆ. ಮಠ-ಮಾನ್ಯಗಳಿಗೆ ಹೋಗಬಾರದು. ನಾನು ಜಾಸ್ತಿ ಹೋಗುವುದೇ ಇಲ್ಲ. ಹಜ್‌ ಯಾತ್ರೆಗೆ ಹೋಗುವ ಆಸೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಕುಕನೂರಿನಲ್ಲಿ ಜಾಮಿಯಾ ಮಸೀದಿ ಬಜಾರ್ ಮತ್ತು ಮುಸ್ಲಿಂ ಖಬರಸ್ಥಾನ (ಸುನ್ನಿ) ಕಮಿಟಿ ಆಶ್ರಯದಲ್ಲಿ ಮಹಮ್ಮದ ಪೈಗಂಬರ್‌ ಜಯಂತಿ ನಿಮಿತ್ತ ಆಯೋಜಿಸಿದ್ದ ಮುಸ್ಲಿಂ ಸಮಾಜದವರ ಉಚಿತ ಸಾಮೂಹಿಕ ವಿವಾಹ(ನಿಖಾಃ) ಸಮಾರಂಭದಲ್ಲಿ ಭಾಗವಹಿಸಿ, ನವ ದಂಪತಿಗಳಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮ ಒಂದು ಶ್ರೇಷ್ಠ ಧರ್ಮ. ಇಸ್ಲಾಂ ಬಗ್ಗೆ ತಪ್ಪು ಕಲ್ಪನೆ ಮಾಡಲಾಗುತ್ತಿದೆ. ನಾನು ಕುರಾನ್ ಸ್ಟಡಿ ಮಾಡಲು ತಯಾರಿದ್ದೇನೆ. ಧರ್ಮದ ಬಗ್ಗೆ ಸ್ಟಡಿ ಮಾಡಬೇಕು. ಅವುಗಳ ಹಿಂದಿನ ಇತಿಹಾಸವನ್ನು ಸ್ಟಡಿ ಮಾಡಬೇಕು. ನನಗೆ ಹಜ್‌ ಯಾತ್ರೆಗೆ ಹೋಗುವುದಕ್ಕೆ ಆಸೆ ಇದೆ. ಆದರೆ ಅವಕಾಶ ಇಲ್ಲ. ಅಲ್ಲಿಗೆ ಹೋಗುವುದಕ್ಕೆ ಮತಾಂತರ ಆಗಿರಬೇಕು ಎಂದರು.

ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಕೊಟ್ಟಿಲ್ಲ. ಕುರಾನ್‌ ಯಾರು ಬೇಕಾದರೂ ಓದಬಹುದು. ಮಹಮ್ಮದ್ ಪೈಂಗಬರ್‌ ಇಡೀ ಬ್ರಹ್ಮಾಂಡಕ್ಕೆ ಕುರಾನ್‌ ಕೊಟ್ಟಿದ್ದಾರೆ. ಈ ಧರ್ಮ ವೈಜ್ಞಾನಿಕವಾಗಿದೆ. ಮನುಷ್ಯ ಹೇಗೆ ಬದುಕಬೇಕೆಂದು ಈ ಧರ್ಮದಲ್ಲಿದೆ. ಮತಾಂತರ ಆಗಬಾರದು. ಜಾತಿವಾದಿ ಆಗಬಾರದು. ಎಲ್ಲ ಧರ್ಮಗಳಲ್ಲಿನ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇಸ್ಲಾಂ ಧರ್ಮ ಬಹಳ ಮಾನವೀಯತೆಯ ಧರ್ಮವಾಗಿದೆ ಎಂದರು.

ಮಸೀದಿಗೆ ಹೋಗಿ ಅಲ್ಲಾಹು ಅಕ್ಬರ್‌ ಅಂದರೆ ನಡೆಯುವುದಿಲ್ಲ. ಎಲ್ಲ ಧರ್ಮದಲ್ಲಿಯೂ ಹಾಗೆಯೇ ಇದೆ. ದೇವಸ್ಥಾನದಲ್ಲಿಯೂ ಹಾಗೆಯೇ ಮಾಡುತ್ತಾರೆ. ಶಾದಿಮಹಲ್‌ಗೆ ಸರ್ಕಾರದ ದುಡ್ಡು ಕೊಟ್ಟಿದ್ದೇವೆ. ಸೌದಿ ಅರೇಬಿಯಾ, ಪಾಕಿಸ್ತಾನ, ಮುಸ್ಲಿಂ ದೇಶದಿಂದ ದುಡ್ಡು ಬರುವುದಿಲ್ಲ. ಯಾವುದೇ ಧರ್ಮ ಇರಲಿ, ಧಾರ್ಮಿಕ ಕ್ಷೇತ್ರದ ಹುಂಡಿ, ಭೂಮಿ ಮುಟ್ಟಿದರೆ ಅದು ಮಹಾಪಾಪ ಎಂದರು.