SK Home Ad
Home ನಮ್ಮ ಜಿಲ್ಲೆ ಧಾರವಾಡ ಗಣೇಶೋತ್ಸವಕ್ಕೆ ಹೈ ಅಲರ್ಟ್: ಡ್ರೋನ್ ಕಣ್ಗಾವಲು, DJ ಮೇಲೆ ಖಾಕಿ ಕಣ್ಣು

ಗಣೇಶೋತ್ಸವಕ್ಕೆ ಹೈ ಅಲರ್ಟ್: ಡ್ರೋನ್ ಕಣ್ಗಾವಲು, DJ ಮೇಲೆ ಖಾಕಿ ಕಣ್ಣು

0
6

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸೆ. 14 ರಿಂದ 25ರವರೆಗೆ ನಡೆಯಲಿರುವ ಗಣೇಶೋತ್ಸವದ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಪೊಲೀಸ್ ಆಯುಕ್ತ ಭೂಷಣ ಜಿ ಬೋರಸೆ ಅವರು , ಹಬ್ಬ ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬಂದೋಬಸ್ತ್‌ಗಾಗಿ ನಗರ ಪೊಲೀಸ್ ಘಟಕದ ಕಾನ್ಸ್‌ಟೇಬಲ್‌ನಿಂದ ಆಯುಕ್ತರವರೆಗಿನ ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜೊತೆಗೆ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ.

ಹೆಚ್ಚುವರಿ ಭದ್ರತೆಯಾಗಿ 500 ಗೃಹರಕ್ಷಕ ದಳದ ಸಿಬ್ಬಂದಿ, 8 ಸಿಎಆರ್ ತುಕಡಿಗಳು, 16 ಕೆಎಸ್ಆರ್‌ಪಿ ತುಕಡಿಗಳು ಹಾಗೂ ಆರ್‌ಎಎಫ್‌ನ ಒಂದು ಕಂಪನಿಯನ್ನು ನಿಯೋಜಿಸಲಾಗುವುದು. ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಸಿಸಿಟಿವಿ ಮೂಲಕ ನಿಗಾ ವಹಿಸಲಾಗುವುದು. ಮೆರವಣಿಗೆ ಮಾರ್ಗಗಳ ಮೇಲೆ 30ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ವೈಮಾನಿಕ ಕಣ್ಗಾವಲು ಇರಲಿದೆ. ಸುಳ್ಳು ಸುದ್ದಿ, ವದಂತಿಗಳನ್ನು ತಡೆಯಲು ಪೊಲೀಸರ ಸಾಮಾಜಿಕ ಜಾಲತಾಣ ಘಟಕ 24 ಗಂಟೆ ಕಾರ್ಯನಿರ್ವಹಿಸಲಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಗಣೇಶ ಮಂಟಪಗಳ ಸ್ಥಳ ಹಾಗೂ ಪಾರ್ಕಿಂಗ್ ಮಾಹಿತಿ ನೀಡಲು ವಿಶೇಷ ವೆಬ್‌ಸೈಟ್ ಸಿದ್ಧಪಡಿಸಲಾಗಿದೆ. ರಸ್ತೆಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ನಾಳೆಯಿಂದ ವಿಶೇಷ ಕಾರ್ಯಾಚರಣೆ ಆರಂಭಿಸಲಾಗುವುದು. ಇಂತಹ ವಾಹನ ಕಂಡುಬಂದಲ್ಲಿ ಫೋಟೊ, ಸ್ಥಳದ ಮಾಹಿತಿಯನ್ನು 9480802002 ವಾಟ್ಸಾಪ್ ಸಂಖ್ಯೆಗೆ ಕಳುಹಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಗಣೇಶ ಮಂಡಳಿಗಳಿಗೆ ಸೂಚನೆ: ವಿದ್ಯುತ್ ಅವಘಡ ತಪ್ಪಿಸಲು ಕೇಬಲಿಂಗ್‌ನಲ್ಲಿ ಎಚ್ಚರಿಕೆ ವಹಿಸಬೇಕು, ಪ್ರತಿ ಮಂಟಪದಲ್ಲಿ ಅಗ್ನಿಶಾಮಕ ಯಂತ್ರ, ನೀರು, ಮರಳಿನ ಬಕೆಟ್ ಇಡಬೇಕು, ಮಂಟಪದ ಒಳಗೆ, ಸುತ್ತಮುತ್ತ ಸಿಸಿಟಿವಿ ಅಳವಡಿಸಬೇಕು, ರಾತ್ರಿ ವೇಳೆ ಸ್ವಯಂಸೇವಕರು ಮಂಟಪದಲ್ಲಿ ಇರಬೇಕು, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಮಂಟಪ ನಿರ್ಮಿಸಬೇಕು ಎಂದು ಸೂಚಿಸಿದ್ದಾರೆ.

ಡಿಜೆಗೆ ಕಡಿವಾಣ: ಪುಣೆ ಪೊಲೀಸರ ಮಾದರಿಯಲ್ಲಿ 4 ಬೇಸ್ ಮತ್ತು 4 ಟಾಪ್ ಸ್ಪೀಕರ್‌ಗಿಂತ ಹೆಚ್ಚು ಬಳಸಬಾರದು. Noise Pollution Rules 2000 ಅನ್ವಯ ಶಬ್ದದ ಮಿತಿ ಮತ್ತು ಸಮಯ ಪಾಲಿಸಬೇಕು. ಲೇಸರ್ ಲೈಟ್, ಅತಿಯಾದ ಶಬ್ದದ DJ ಗಳಿಗೆ ನಿಷೇಧ. ಶಬ್ದ ಅಳತೆಗೆ ಪೊಲೀಸರು Sound Meter ಆ್ಯಪ್ ಬಳಸಲಿದ್ದು, ನಿಯಮ ಮೀರಿದರೆ DJ ಮಾಲೀಕ ಮತ್ತು ಆಪರೇಟರ್ ವಿರುದ್ಧ ನೇರ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.