SK Home Ad
Home ನಮ್ಮ ಜಿಲ್ಲೆ ಕೊಪ್ಪಳ ರಾಜೀನಾಮೆ ಕೊಟ್ಟ ಮೇಲೂ ಪ್ರಚಾರಕ್ಕಾಗಿ ಬಿಜೆಪಿಗರ ಪಾದಯಾತ್ರೆ

ರಾಜೀನಾಮೆ ಕೊಟ್ಟ ಮೇಲೂ ಪ್ರಚಾರಕ್ಕಾಗಿ ಬಿಜೆಪಿಗರ ಪಾದಯಾತ್ರೆ

0
14

ಕೊಪ್ಪಳ: ನಾಗೇಂದ್ರ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ. ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೊದಲ ದಿನದಿಂದಲೇ ಟೇಕ್‌ಅಫ್‌ ಆಗಿದೆ. ಸಿದ್ದರಾಮಯ್ಯನವರು ಸಿಎಂ ಇದ್ದಾಗಲು ಇತ್ತು. ಈಗ ಡಿ.ಕೆ. ಶಿವಕುಮಾರರವರು ಸಿಎಂ ಆದ ಬಳಿಕವೂ ಟೆಪ್‌ಅಫ್‌ ಆಗಿದೆ. ನಾಗೇಂದ್ರ ರಾಜೀನಾಮೆ ಕೊಟ್ಟಿರುವುದು ಸರ್ಕಾರಕ್ಕೆ ಮುಜುಗರ ಏನಿಲ್ಲ. ಆರೋಪಗಳು ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.

ವಿಪಕ್ಷದವರು ಅದನ್ನು ಸುಮ್ ಸುಮ್ಮನ್ನೇ ವಿವಾದ ಮಾಡಿದರು. ಬಿ. ನಾಗೇಂದ್ರರವರ ಮೇಲೆ ಯಾವುದೇ ಸಾಕ್ಷಿಗಳು ಇರಲಿಲ್ಲ. ಎಸ್.ಐ.ಟಿ ತನಿಖೆಯಲ್ಲೂ ಯಾವುದೇ ಸಾಕ್ಷಾಧಾರಗಳು ಇರಲಿಲ್ಲ. ರಾಜಕೀಯ ದುರುದ್ದೇಶದಿಂದ ನಾಗೇಂದ್ರ ರಾಜಕೀಯ ಭವಿಷ್ಯಕ್ಕೆ ಮಸಿ ಬಳಿಯೋ ಕೆಲಸ ಆಗಿದೆ. ಆದರೆ ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಬಸವರಾಜ ಶಿವಣ್ಣನವರ್‌ಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟಿರುವ ತೀರ್ಮಾನವಾಗಿದೆ ಎಂದರು.

ರಾಯಚೂರು ಬಳ್ಳಾರಿ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಪ್ರಚಾರ ಮಾಡಿಕೊಳ್ಳಲು ಏನಾದರೊಂದು ವಿಷಯ ಬೇಕು. ರಾಜೀನಾಮೆ ಕೊಡಿ ಎಂದು ಪಾದಯಾತ್ರೆ ಮಾಡುತ್ತೇವೆಂದರು. ಈಗ ರಾಜೀನಾಮೆ ಕೊಟ್ಟರೂ ಕೂಡಾ, ಪಾದಯಾತ್ರೆ ಮಾಡಿದರೆ ಅದಕ್ಕೆ ಅರ್ಥ ಇಲ್ಲ. ಪ್ರಚಾರಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದರೆ ಮಾಡಿಕೊಳ್ಳಲಿ ಎಂದರು.

ಸಿದ್ದು-ಬಿಜೆಪಿಗರ ಭೇಟಿಗೆ ವಿಶೇಷ ರಾಜಕೀಯ ಅರ್ಥ ನೀಡಬೇಡಿ: ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿರುವ ಬಗ್ಗೆ ಅವರನ್ನೇ ಕೇಳಬೇಕು. ಸಿಎಂ ಸ್ಥಾನದಿಂದ ಕೆಳಗೆ ಇಳಿದ ಬಳಿಕ, ಸಹಜವಾಗಿ ಬೇರೆ ಪಕ್ಷದ ನಾಯಕರು ಭೇಟಿ ಮಾಡುತ್ತಾರೆ. ಅವರ ಜೊತೆ ಆಪ್ತರಾಗಿರುವ ನಾಯಕರು ಬಂದು ಭೇಟಿ ಮಾಡಿದ್ದಾರೆ. ಇದಕ್ಕೆ ವಿಶೇಷ ರಾಜಕೀಯ ಅರ್ಥ ನೀಡಬಾರದು. ಬಿಜೆಪಿ ನಾಯಕರ ಜೊತೆ ಚುನಾವಣೆಯ ಚರ್ಚೆ ಮಾಡಲು ಸಾಧ್ಯವಿಲ್ಲ. ಯಾವತ್ತಿದ್ದರೂ ಸಿದ್ದರಾಮಯ್ಯ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧ. 2028ರ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ಅಂತಿಮ ಎಂದರು.