ಕಲಬುರಗಿ: ಖ್ಯಾತ ನ್ಯಾಯವಾದಿ ಹಾಗೂ ನಗರದ ನೂತನ ವಿದ್ಯಾಲಯ (ಎನ್‌ವಿ) ಸಂಸ್ಥೆಯ ಮಾಜಿ ಉಪಾಧ್ಯಕ್ಷರಾದ ರಾಮಾಚಾರ್ಯ ಪಪ್ಪು ಅವರು ಜೂನ್ 21ರಂದು ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಓರ್ವ ಪುತ್ರರಾದ ಎನ್‌ವಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಆನಂದ ಪಪ್ಪು ವಕೀಲರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಾಯಚೂರಿನ ‘ರಾಯಚೂರ ವಾಣಿ’ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿರುವ ಅರವಿಂದ ಎನ್. ಕುಲಕರ್ಣಿ ಅವರು ಮೃತರ ಅಳಿಯಂದಿರು.
ಮೃತರ ಅಂತ್ಯಕ್ರಿಯೆಯನ್ನು ರವಿವಾರ ಸಂಜೆ 5 ಗಂಟೆಗೆ ನಗರದ ಜೇವರ್ಗಿ ರಸ್ತೆಯ ಚಿತ್ತಾರಿ ಅಡ್ಡೆ ಬಳಿಯ ಚಿತಾಗಾರದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದವರು ತಿಳಿಸಿದ್ದಾರೆ.
ಧರ್ಮಸಿಂಗ್ ಒಡನಾಡಿ: ರಾಮಾಚಾರ್ಯ ಪಪ್ಪು ಅವರು ಮಾಜಿ ಮುಖ್ಯಮಂತ್ರಿ ದಿ. ಎನ್. ಧರ್ಮಸಿಂಗ್ ಅವರ ಒಡನಾಡಿಯಾಗಿದ್ದರು. ಧರ್ಮಸಿಂಗ್ ಅವರಿಗೆ ಅತ್ಯಂತ ಆಪ್ತರಾಗಿದ್ದರು.
ಕಾನೂನು ಪಂಡಿತರಾಗಿದ್ದ ಅವರು ಸುಮಾರು ಆರು ದಶಕಗಳಿಂದ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಸುಪ್ರಸಿದ್ಧರಾಗಿದ್ದರು. ಕೃಷ್ಣಾ ನದಿ ನ್ಯಾಯಾಧಿಕರಣದಲ್ಲಿ ಕರ್ನಾಟಕ ರಾಜ್ಯದ ಪರ ವಕಾಲತ್ತು ವಹಿಸಿದ್ದ ವಕೀಲರ ತಂಡದ ಹಿರಿಯ ಸದಸ್ಯರಾಗಿದ್ದರು.
ವಕೀಲಿ ವೃತ್ತಿಯ ಜೊತೆಗೆ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಲಬುರಗಿ ನಗರದ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಆಧ್ಯಾತ್ಮ ಜೀವಿಯಾಗಿದ್ದ ಅವರು ನಾಡಿನ ಹಿರಿಯ ವಿದ್ವಾಂಸರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರ ಆಪ್ತರಾಗಿದ್ದರು. ಅವರ ಅಗಲಿಕೆಯೊಂದಿಗೆ ನಾಡಿನ ಕಾನೂನು ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.






















