ದಾವಣಗೆರೆ: ವಿದ್ಯಾರ್ಥಿಗಳ ಹೊಟ್ಟೆ ತುಂಬಬೇಕಿದ್ದ ಸರ್ಕಾರಿ ಹಾಸ್ಟೆಲ್‌ನ ಆಹಾರ ಧಾನ್ಯಗಳೇ ಅಕ್ರಮ ಸಾಗಣೆಗೆ ಸಿದ್ಧವಾಗಿದ್ದ ಆರೋಪ ದಾವಣಗೆರೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.
ದಾವಣಗೆರೆಯ ಪೂಜಾರ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 11 ಕ್ವಿಂಟಲ್ ಅಕ್ಕಿ ಹಾಗೂ 10 ಕ್ವಿಂಟಲ್ ಗೋಧಿ ಸೇರಿ ಒಟ್ಟು 21 ಕ್ವಿಂಟಲ್ ಆಹಾರ ಧಾನ್ಯಗಳನ್ನು ಮೇಲಧಿಕಾರಿಗಳ ಅನುಮತಿಯಿಲ್ಲದೆ ಬೇರೆಡೆಗೆ ಸಾಗಿಸಲು ಸಿದ್ಧಪಡಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿ ನಿಲಯದಿಂದ ಆಹಾರ ಧಾನ್ಯಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ದಾವಣಗೆರೆ ತಹಶೀಲ್ದಾರ್ ರಾಜೇಶ್ ಕುಮಾರ್, ಆಹಾರ ನಿರೀಕ್ಷಕರು ಹಾಗೂ ಕಂದಾಯ ನಿರೀಕ್ಷಕರೊಂದಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಧಾನ್ಯ ಸಾಗಿಸಲು ಬಳಸಲಾಗುತ್ತಿದ್ದ ವಾಹನದ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.






















