ಕಲಬುರಗಿ: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಗೆ ಕಂಕಟ ಬಂದಾಗ ಹಿಜಾಬ್, ಜನಿವಾರ್, ಶಿವದಾರ ಜಾರಿ ಮಾಡುವ ಮೂಲಕ ಜನರ ಮನಸ್ಸು ಬೇರೆಡೆ ಸೆಳೆಯುವ ಯತ್ನ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಕುರ್ಚಿಗೆ ಕಂಕಟ ಬಂದಾಗ ಕಳೆದ ಎಂಟು ವರ್ಷಗಳಿಂದ ಇಂತಹ ಗಿಮಿಕ್ ಮಾಡುತ್ತಲೇ ಬಂದಿದ್ದಾರೆ ಎಂದು ಆಪಾದಿಸಿದರು.
ಮೊದಲು ಜಾತಿಗಣತಿ ಎಂದು ಘೋಷಣೆ ಮಾಡಿದ್ದರು, ಆದರೆ ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಮತ್ತು ನಾಗಮೋಹನದಾಸ ವರದಿ ಜಾರಿಗೆ ತರಲಿಲ್ಲ ಜೊತೆಗೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಯೂ ಮಾಡಿಲ್ಲ. ಇದೀಗ ಶಾಲೆ-ಕಾಲೇಜಿನಲ್ಲಿ ಹಿಜಾಜ್, ಜನಿವಾರ ಮತ್ತು ಶಿವದಾರ ಧರಸುವ ಆದೇಶ ಜಾರಿ ಮಾಡಿ ಜನರಿಗೆ ಮಿಸ್ ಗೈಡ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಜನತೆ ಅನಾದಿಕಾಲದಿಂದಲೂ ತಮ್ಮ ಕಾಯಕದೊಂದಿಗೆ ತಮ್ಮ ಧರ್ಮ ಮತ್ತು ಸಂಸ್ಕೃತಿ ಜೊತೆಗೆ ಬದುಕುತ್ತಿದ್ದಾರೆ. ಆದರೆ, ಈ ಬಂಡ ಸಿದ್ದರಾಮಯ್ಯನ ಸರ್ಕಾರ ಇಂತಹ ರಾಜಕೀಯ ಗಿಮಿಕ್ ಮಾಡಿ ಮಕ್ಕಳ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಬಡವ, ಶ್ರೀಮಂತ ಎಂಬ ಬೇಧ-ಭಾವ ಮಕ್ಕಳಲ್ಲಿ ಬರಬಾರದು ಎಂಬ ಕಾರಣಕ್ಕೆ ಸರಕಾರಗಳು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಏಕರೂಪ ಸಮವಸ್ತ್ರ ಜಾರಿಗೆ ತಂದಿವೆ. ಆದರೆ, ಸಿದ್ದರಾಮಯ್ಯ ತಿಳಿ ನೀರಿನ ಮೇಲೆ ಕಲ್ಲು ಹೊಡೆದು ಬಡಿದಬ್ಬಿಸಿ ಮಕ್ಕಳ ಮನಸ್ಸಿನಲ್ಲಿ ಬೇಧಭಾವ ಮೂಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಮಸ್ಯೆ ಹುಟ್ಟಿಹಾಕುತ್ತಿರುವ ಜನವಿರೋಧಿ ಆದೇಶ ನಾವು ಒಪ್ಪುವುದಿಲ್ಲ ಎಂದರು.
ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಧಿಕ ದಲಿತರ ಮೇಲೆ ದೌರ್ಜನ್ಯ, ಮಹಿಳೆಯರ ಕೊಲೆ ಪ್ರಮಾಣ ಮುಗಿಲು ಮುಟ್ಟಿದೆ. ದಲಿತರ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ದಲಿತರಿಗೆ ಮೀಸಲಿದ್ದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಒಳಮೀಸಲಾತಿಯಲ್ಲಿ ಮೋಸ ಮಾಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.






















