Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಪ್ರಧಾನಿ ಮೋದಿ ಕರೆಗೆ ಸ್ಪಂದನೆ: ಮೆಟ್ರೋದಲ್ಲಿ ಸಂಚರಿಸಿದ ಸೋಮಣ್ಣ

ಪ್ರಧಾನಿ ಮೋದಿ ಕರೆಗೆ ಸ್ಪಂದನೆ: ಮೆಟ್ರೋದಲ್ಲಿ ಸಂಚರಿಸಿದ ಸೋಮಣ್ಣ

0
58

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಮಿತವ್ಯಯ, ಇಂಧನ ಉಳಿತಾಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಯ ಕರೆಗೆ ಸ್ಪಂದಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಮಾಡುವ ಮೂಲಕ ಮಾದರಿಯಾದರು.

ನಗರದ ಎಂ.ಜಿ ರಸ್ತೆ ಮೆಟ್ರೋ ಸ್ಟೇಷನ್‌ನಿಂದ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್‌ವರೆಗೆ ಇಬ್ಬರೂ ನಾಯಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಮಾತನಾಡಿದ ಅವರು, ಇಂಧನ ಉಳಿತಾಯ, ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವುದು ಹಾಗೂ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಯಾಣ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೆಟ್ರೋ ಪ್ರಯಾಣದ ಬಳಿಕ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಇಬ್ಬರೂ ಇವಿ ಬೈಕ್‌ನಲ್ಲಿ ಸಂಚರಿಸಿದರು. ಸಾರ್ವಜನಿಕ ಸಾರಿಗೆ ಜೊತೆಗೆ ವಿದ್ಯುತ್ ವಾಹನ ಬಳಕೆಯೂ ಭವಿಷ್ಯದ ಅಗತ್ಯವಾಗಿದೆ ಎಂಬ ಸಂದೇಶವನ್ನು ಈ ಮೂಲಕ ನೀಡಲಾಯಿತು.

ಇತ್ತೀಚೆಗೆ ಪ್ರಧಾನಿ ಮೋದಿ ದೇಶದ ಜನತೆಗೆ ಇಂಧನ ಮಿತವ್ಯಯದ ಬಗ್ಗೆ ವಿಶೇಷ ಕರೆ ನೀಡಿದ್ದರು. ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡುವುದು, ಅನಾವಶ್ಯಕ ವಾಹನ ಸಂಚಾರ ತಪ್ಪಿಸುವುದು ಹಾಗೂ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಅವರು ಸಲಹೆ ನೀಡಿದ್ದರು.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ತೈಲ ಪೂರೈಕೆ ಮೇಲೆ ಒತ್ತಡ ಉಂಟಾಗಿದ್ದು, ಇಂಧನ ದರ ಏರಿಕೆಯ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಉಳಿತಾಯ ಹಾಗೂ ಮಿತವ್ಯಯ ಜೀವನಶೈಲಿಗೆ ಒತ್ತು ನೀಡಲಾಗುತ್ತಿದೆ.

ಬಿಜೆಪಿ ನಾಯಕರು ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ಬಳಕೆ, ಇವಿ ವಾಹನಗಳ ಪ್ರಚಾರ ಹಾಗೂ ಇಂಧನ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದೇ ಭಾಗವಾಗಿ ಬೆಂಗಳೂರಿನಲ್ಲಿ ಈ ಪ್ರಯಾಣ ಆಯೋಜಿಸಲಾಯಿತು.

ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ಇಂಧನ ಬಳಕೆಯ ನಡುವೆಯೇ ಜನರು ಸಾಧ್ಯವಾದಷ್ಟು ಮೆಟ್ರೋ, ಬಸ್ ಹಾಗೂ ಇವಿ ವಾಹನಗಳ ಬಳಕೆಗೆ ಮುಂದಾಗಬೇಕು ಎಂದು ನಾಯಕರು ಕರೆ ನೀಡಿದರು.

ಸಾರ್ವಜನಿಕ ಸಾರಿಗೆ ಬಳಕೆಯಿಂದ ಇಂಧನ ಉಳಿವಿನ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.