ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ವಚನಾನಂದ ಸ್ವಾಮೀಜಿ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಿಶೇಷ ಪೋಕ್ಸೊ ನ್ಯಾಯಾಲಯವು ತನ್ನ ಮಹತ್ವದ ಆದೇಶವನ್ನು ಜು. 13ಕ್ಕೆ ಕಾಯ್ದಿರಿಸಿದೆ.
ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ, ನಿಯಮಿತ ಜಾಮೀನು ಪಡೆದುಕೊಳ್ಳಲು ಹೈಕೋರ್ಟ್ ಸ್ವಾಮೀಜಿಯವರಿಗೆ ಮೂರು ವಾರಗಳ ಕಾಲಾವಕಾಶ ನೀಡಲಾಗಿತ್ತು. ಈ ಗಡುವು ಮುಗಿಯುವ ಮುನ್ನವೇ, ಜೂ. 27ರಂದು ವಚನಾನಂದ ಸ್ವಾಮೀಜಿಯವರು ಖುದ್ದು ದಾವಣಗೆರೆಯ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಹಾಜರಾಗಿ ರೆಗ್ಯುಲರ್ ಬೇಲ್ ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜು. 4ರಂದು ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆಯಿತು. ಜು. 3ರಂದು ಸ್ವಾಮೀಜಿಯವರ ಪರ ವಕೀಲರು ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿದ್ದರು. ಇದರ ಮುಂದುವರಿದ ಭಾಗವಾಗಿ, ಜು. 4ರಂದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು (ಪಿಪಿ) ಪ್ರಬಲ ವಾದ ಮಂಡಿಸಿದರು.
ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರ(ಜು.6)ಕ್ಕೆ ಮುಂದೂಡಲಾಗಿತ್ತು. ಸೋಮವಾರ ದೂರದಾರರ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದರು.
ಈ ಪ್ರಕರಣದ ಸುದೀರ್ಘ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಸದ್ಯಕ್ಕೆ ಆದೇಶವನ್ನು ಪ್ರಕಟಿಸದೇ ಕಾಯ್ದಿರಿಸಿದ್ದು, ಜು. 13ರಂದು ತನ್ನ ಅಂತಿಮ ಆದೇಶವನ್ನು ಹೊರಡಿಸಲಿದೆ.
ಇದೊಂದು ತೀರ್ಪು ಅಲ್ಲದಿದ್ದರೂ, ಪ್ರಕರಣದ ಮುಂದಿನ ಹಂತವನ್ನು ನಿರ್ಧರಿಸುವ ಪ್ರಮುಖ ಆದೇಶ ಆಗಿರುವುದರಿಂದ ಉಭಯ ಪಕ್ಷಗಳಲ್ಲೂ ತೀವ್ರ ಕುತೂಹಲ ಮೂಡಿಸಿದೆ. ಜುಲೈ 13ರ ಆದೇಶದ ಬಳಿಕ ಈ ವಿವಾದಕ್ಕೆ ಯಾವ ತಿರುವು ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ.





















