Home Advertisement
Home ಸುದ್ದಿ ದೇಶ ‘ಡಾರ್ಲಿಂಗ್, ನಿನಗಾಗಿಯೇ ನೀಟ್‌ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇನೆ’ ಎಂದ ಪ್ರಾಧ್ಯಾಪಕ ಸಿಕ್ಕಿಬಿದ್ದದ್ದು ಹೇಗೆ?

‘ಡಾರ್ಲಿಂಗ್, ನಿನಗಾಗಿಯೇ ನೀಟ್‌ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇನೆ’ ಎಂದ ಪ್ರಾಧ್ಯಾಪಕ ಸಿಕ್ಕಿಬಿದ್ದದ್ದು ಹೇಗೆ?

0
144

ಲಕ್ನೋ: ಡಾರ್ಲಿಂಗ್ ನಿನಗಾಗಿಯೇ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿಟ್ಟಿದ್ದೇನೆ. ಪರೀಕ್ಷೆಗಿಂತ ಮುಂಚಿತವಾಗಿ ಬಂದು ನನ್ನನ್ನು ಭೇಟಿಯಾಗು. ಹೀಗೆಂದು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬಳಿಗೆ ಫೋನ್‌ನಲ್ಲಿ ಲೈಂಗಿಕ ಕಿರುಕುಳ ನೀಡಿ, ಪ್ರಶ್ನೆ ಪತ್ರಿಕೆ ಸೋರಿಕೆಯ ಆಮಿಷವೊಡ್ಡಿದ್ದ ಲಕ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಪರಮಜೀತ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿನಿಯ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಮಾರು ಎರಡು ನಿಮಿಷಗಳ ಮೂರು ಪ್ರತ್ಯೇಕ ಆಡಿಯೋ ಕ್ಲಿಪ್‌ಗಳಲ್ಲಿ, ಪ್ರಾಧ್ಯಾಪಕನು ವಿದ್ಯಾರ್ಥಿನಿಯೊಂದಿಗೆ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾನೆ. “ನಿನಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಅಥವಾ ಬೇರೆ ಯಾವುದೇ ಬೆಂಬಲ ಬೇಕಿದ್ದರೂ ನಾನು ನೀಡಲು ಸಿದ್ಧ. ನಿನಗಾಗಿ ಕೋರ್ ಮತ್ತು ಎಲೆಕ್ಟಿವ್ ವಿಷಯಗಳೆರಡರ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದೇನೆ. ಪರೀಕ್ಷೆ ಮುಗಿದ ಮೇಲೆ ನೀನು ನನ್ನನ್ನು ಯಾವಾಗ ಬಂದು ಭೇಟಿಯಾಗುತ್ತೀಯಾ? ಪರೀಕ್ಷೆಗೂ ಮುನ್ನವೇ 7 ದಿನಗಳ ಒಳಗಾಗಿ ಬಂದು ನನ್ನನ್ನು ನೋಡು” ಎಂದು ಒತ್ತಾಯಿಸಿರುವುದು ಕೇಳಿಬಂದಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ, “ಬೇಡ ಸಾರ್, ನನಗೆ ಅಂತಹ ಯಾವುದೇ ತೊಂದರೆ ಇಲ್ಲ. ನಾನು ಈಗಾಗಲೇ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ” ಎಂದು ನಿರಾಕರಿಸಿದರೂ, ಪ್ರಾಧ್ಯಾಪಕ ಮಾತ್ರ ಪದೇ ಪದೇ ಭೇಟಿಯಾಗುವಂತೆ ಒತ್ತಡ ಹೇರಿದ್ದಾನೆ.

ಆಡಿಯೋ ಕ್ಲಿಪ್‌ಗಳು ವೈರಲ್ ಆಗಿ ಕ್ಯಾಂಪಸ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ತೀವ್ರ ಮಾನಸಿಕ ಒತ್ತಡಕ್ಕೊಳಗಾದ ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿ ಮತ್ತು ಪ್ರಾಕ್ಟರ್ ಕಚೇರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ವಿದ್ಯಾಕಾಂತ್ ತ್ರಿಪಾಠಿ ಅವರು ಹಸಂಗಂಜ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಜೊತೆಗೆ ಆಡಿಯೋ ರೆಕಾರ್ಡಿಂಗ್‌ಗಳಿದ್ದ ಪೆನ್‌ಡ್ರೈವ್‌ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜೆ.ಪಿ. ಸೈನಿ ಅವರು ಈ ಕುರಿತು ತನಿಖೆ ನಡೆಸಿ 24 ಗಂಟೆಗಳ ಒಳಗಾಗಿ ವರದಿ ನೀಡುವಂತೆ ಆಂತರಿಕ ಸಮಿತಿಗೆ ಸೂಚಿಸಿದ್ದಾರೆ. “ಸಂಸ್ಥೆಯ ಘನತೆ ಮತ್ತು ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರುವ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ” ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಎಬಿವಿಪಿ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರಾಧ್ಯಾಪಕನನ್ನು ಸೇವೆಯಿಂದ ವಜಾಗೊಳಿಸುವಂತೆ ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿವೆ.