SK Home Ad
Home ನಮ್ಮ ಜಿಲ್ಲೆ ಕಲಬುರಗಿ ನಿವೃತ್ತಿಯ ಬೆನ್ನಲ್ಲೇ ಲೋಕಾಯುಕ್ತ ಶಾಕ್: ಮಾಜಿ ಕಚೇರಿ ಅಧೀಕ್ಷಕ ಮನೆ ಸೇರಿ 5 ಕಡೆ ದಾಳಿ

ನಿವೃತ್ತಿಯ ಬೆನ್ನಲ್ಲೇ ಲೋಕಾಯುಕ್ತ ಶಾಕ್: ಮಾಜಿ ಕಚೇರಿ ಅಧೀಕ್ಷಕ ಮನೆ ಸೇರಿ 5 ಕಡೆ ದಾಳಿ

0
118

ಆದಾಯ ಮೀರಿ ಆಸ್ತಿ ಆರೋಪ: ನಿವೃತ್ತ ಕಚೇರಿ ಅಧೀಕ್ಷಕ ಮನೆ ಸೇರಿ ಐದು ಕಡೆ ಲೋಕಾಯುಕ್ತ ದಾಳಿ

ಸಂ.ಕ. ಸಮಾಚಾರ ಕಲಬುರಗಿ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಮುಂಜಾನೆ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.

ಪಂಚಾಯತ್ ರಾಜ ಇಲಾಖೆಯ ನಿವೃತ್ತ ಕಚೇರಿ ಅಧೀಕ್ಷಕ ಮಾಣಿಜರಾವ ಕನಕಟ್ಟಿ ಅವರಿಗೆ ಸೇರಿದ ನಿವಾಸ ಹಾಗೂ ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಹಾಗೂ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಕಲಬುರಗಿ ನಗರದ ಗೋದುತಾಯಿ ಕಾಲೋನಿಯಲ್ಲಿರುವ ಕನಕಟ್ಟಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಆಸ್ತಿ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿರುವ ವಾಣಿಜ್ಯ ಬಳಕೆಯ ಕಾಂಪ್ಲೆಕ್ಸ್, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿರುವ ತೋಟದ ಮನೆ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿಯಿತು.

ಮಾಹಿತಿಯ ಪ್ರಕಾರ, ಮಾಣಿಜರಾವ ಕನಕಟ್ಟಿ ಅವರು ಕೇವಲ ಹದಿನೈದು ದಿನಗಳ ಹಿಂದಷ್ಟೇ ಸೇವೆಯಿಂದ ನಿವೃತ್ತರಾಗಿದ್ದರು. ನಿವೃತ್ತಿಯ ಬೆನ್ನಲ್ಲೇ ಲೋಕಾಯುಕ್ತರ ಈ ಕಾರ್ಯಾಚರಣೆ ನಡೆದಿರುವುದು ಗಮನ ಸೆಳೆದಿದೆ.

ದಾಳಿಯ ವೇಳೆ ಭೂಮಿ, ಮನೆ, ವಾಣಿಜ್ಯ ಕಟ್ಟಡ, ಬ್ಯಾಂಕ್ ಖಾತೆಗಳು, ಹೂಡಿಕೆಗಳು ಹಾಗೂ ಇತರೆ ಆಸ್ತಿ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶೋಧ ಕಾರ್ಯ ಪೂರ್ಣಗೊಂಡ ನಂತರವೇ ವಶಪಡಿಸಿಕೊಂಡ ದಾಖಲೆಗಳು ಹಾಗೂ ಪತ್ತೆಯಾದ ಆಸ್ತಿಗಳ ಮೌಲ್ಯದ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಲೋಕಾಯುಕ್ತ ಅಧಿಕಾರಿಗಳ ಐದು ಪ್ರತ್ಯೇಕ ತಂಡಗಳು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದು, ತನಿಖೆ ಅಂತಿಮ ಹಂತ ತಲುಪಿದ ಬಳಿಕ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.