ಧಾರವಾಡ: ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷಭೇದವಿಲ್ಲ. ಜನರ ಒಳಿತಿಗಾಗಿ ಕೆಲಸ ಮಾಡುತ್ತೇನೆ. ಯಾರೂ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಶಾಸಕ ವಿನಯ ಕುಲಕರ್ಣಿ ತಿಳಿಸಿದರು.
ಧಾರವಾಡ ಮಹಾನಗರ ಪಾಲಿಕೆ ಸಭಾಭವನದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 9 ವಾರ್ಡ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡ-ಅಮ್ಮಿನಬಾವಿ ಮಧ್ಯೆ ಇರುವ ಕುಡಿಯುವ ನೀರು ಪೂರೈಕೆ ಮಾರ್ಗ ತೀವ್ರ ಹಳೆಯದಾಗಿ ಶೇ. 45ರಷ್ಟು ನೀರು ಪೋಲಾಗುತ್ತಿದೆ. ಇದನ್ನು ಉನ್ನತೀಕರಿಸಿ ಹೊಸ ಪೈಪ್‌ಲೈನ್ ಅಳವಡಿಸಲು 35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿದ್ದೆ. ಆದರೆ ರಾಜಕೀಯ ಉದ್ದೇಶದಿಂದ ಮಹಾನಗರ ಪಾಲಿಕೆ ಆಡಳಿತಾರೂಢ ಬಿಜೆಪಿ ಮುಖಂಡರು ಇದನ್ನು ತಿರಸ್ಕರಿಸಿದ್ದಾರೆ. ಇದಷ್ಟೇ ಅಲ್ಲ ಇಂತಹ ಹತ್ತಾರು ಯೋಜನೆಗಳಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಇದನ್ನು ಸಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
110 ಕೋಟಿ ರೂ. ಕಾಮಗಾರಿ: ಧಾರವಾಡ ನಗರದ 1ರಿಂದ 9ನೇ ವಾರ್ಡ್‌ವರೆಗಿನ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಈವರೆಗೆ 110 ಕೋಟಿ ರೂ. ಗಳಷ್ಟು ಅನುದಾನ ನೀಡಲಾಗಿದೆ. ಕೆಲವು ಕಾಮಗಾರಿಗಳು ಮುಗಿದಿದ್ದು, ಇನ್ನಷ್ಟು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಆದಷ್ಟು ಬೇಗ ಇವುಗಳನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಾರುಕಟ್ಟೆ ಅಭಿವೃದ್ಧಿ ಮಾಡಿ: ಸೂಪರ್ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೊಸ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಸೂಚನೆ ನೀಡಿದಾಗ, 250 ಕೊಟಿ ರೂ.ವೆಚ್ಚ ಅಂದಾಜು ಮಾಡಲಾಗಿತ್ತು ಎಂದರು. ಇದೀಗ ಹೊಸ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಮಾತನಾಡಿ, ಧಾರವಾಡ ನಗರದಲ್ಲಿರುವ ಪಾಲಿಕೆ ಸಾರ್ವಜನಿಕ ಆಸ್ಪತ್ರೆಯನ್ನು(ಮುನ್ಸಿಪಾಲ್ಟಿ ದವಾಖಾನೆ) ಈಗಾಗಾಲೇ ಡಯಾಲಿಸಿಸ್ ಕೇಂದ್ರಕ್ಕಾಗಿ ಖಾಸಗಿಯವರಿಗೆ ನೀಡಲಾಗಿದೆ. ಕೂಡಲೇ ಅದನ್ನು ಹಿಂದಕ್ಕೆ ಪಡೆಯಬೇಕು. ಮೇಲ್ದರ್ಜೆಗೆ ಏರಿಸಿ ಅದನ್ನು ಹೆರಿಗೆ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.





















