ಧಾರವಾಡ: ಪತ್ನಿಯ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.
ಗರಗ ಗ್ರಾಮದ ಮೌಲಾಲಿ ಗಲ್ಲಿಯಲ್ಲಿ ಘಟನೆ ನಡೆದಿದ್ದು, ಸಲ್ಮಾ(22) ಕೊಲೆಯಾದ ಮಹಿಳೆ. ಆಕೆಯ ಪತಿ ಮೌಲಾಸಾಬ್(28) ಕೊಲೆ ಮಾಡಿದ ಬಳಿಕ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಪತ್ನಿಯ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಕೆಲ ದಿನಗಳಿಂದ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಎರಡೂ ಕುಟುಂಬಗಳ ಸದಸ್ಯರ ನಡುವೆ ರಾಜೀ ಸಂಧಾನವೂ ನಡೆದಿತ್ತು. ಆದರೆ, ಸಮಸ್ಯೆ ಬಗೆಹರಿಯದೆ ಮುಂದುವರಿದಿದ್ದು, ಮೌಲಾಸಾಬ್ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















