ಹುಬ್ಬಳ್ಳಿ: ಸೆಪ್ಟೆಂಬರ್ 5 ರಂದು ಪ್ರಜಾ ಸೇವಾ ಇಲಾಖೆಯನ್ನು ಪ್ರಾರಂಭಿಸಲಾಗುವುದು. ಅಂದು ಶಿಕ್ಷಕರ ದಿನಾಚರಣೆ ಕೂಡ ಇದೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳವಾರ ರಾತ್ರಿ ನಗರದ ಹೊಟೇಲ್‌ನಲ್ಲಿ ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ಮಾದರಿಯಲ್ಲಿ ಶಾಸಕರು ತಮ್ಮ ಕ್ಷೇತ್ರದಲ್ಲಿ ತಿಂಗಳಲ್ಲಿ ಎರಡು ಬಾರಿ ಜನರ ಸಮಸ್ಯೆಗಳನ್ನು ಅಲಿಸಬೇಕು. ಎಲ್ಲಾ ಅರ್ಜಿದಾರರಿಗೆ ಸ್ವೀಕೃತಿ ಹಾಗೂ ಅರ್ಜಿ ಸ್ಥಿತಿಗತಿ ಬಗ್ಗೆ ತಿಳಿಯಪಡಿಸಬೇಕು. ಯಾವ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ? ಎಂಬುದರ ಬಗ್ಗೆ ಮಾಹಿತಿ ಒದಗಿಸಬೇಕು. ಪ್ರತ್ಯೇಕ ತಂಡವನ್ನು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡಲಾಗುವುದು. ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಹಂತಗಳಲ್ಲಿ ಸಭೆ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳು ಪ್ರತಿ ಹಳ್ಳಿಗೂ ಕೂಡ ಭೇಟಿ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕಿದೆ. ಭಾರತ ಜೋಡೋ ಆನ್‌ಲೈನ್ ಬಳಿಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಗ್ಯಾರಂಟಿ ಯೋಜನೆಗಳ ಸದಸ್ಯರು ಅರ್ಜಿ ನೀಡಲಿದ್ದಾರೆ. ನಾಳೆಯಿಂದ ಅರ್ಜಿ ವಿತರಣೆ ಮಾಡುವರು. ಯುವಕರಲ್ಲಿರುವ ಯುವ ಪ್ರತಿಭೆಯನ್ನು ಹೊರತರಲು ಭಾರತ ಜೋಡೊ ಕಾರ್ಯಕ್ರಮ ನಡೆಯಲಿದೆ. ಸಮುದಾಯ ಭವನ, ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೇ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ. ಜನರ ಮಧ್ಯೆ ಸರ್ಕಾರ ಇರಬೇಕು. ಎಲ್ಲಾ ವರ್ಗದ ಜನರಿಗೆ ಸವಲತ್ತು ದೊರೆಯಬೇಕು. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಮಹಿಳೆಯರು ಉತ್ತಮ ಜೀವನ ಕಟ್ಟಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ಹಣ ಬಳಕೆಯಾಗಬೇಕು. ಗೃಹಜ್ಯೋತಿ ಯೋಜನೆ ಬೇಡ ಎಂದು ಸುಮಾರು 3 ಲಕ್ಷ ಜನರು ತಿಳಿಸಿದ್ದಾರೆ. ಎಸ್‌ಐಆರ್‌ನಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಮತದಾನದ ಹಕ್ಕು ಎಲ್ಲರಿಗೂ ದೊರೆಯಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಮಾತನಾಡಿ, ಭಾರತ ಜೋಡೊ ಕಾರ್ಯಕ್ರಮವು ದೇಶದಲ್ಲೇ ವಿಶಿಷ್ಟ ಕಾರ್ಯಕ್ರಮವಾಗಿದೆ. ಒಂದು ರೀತಿಯ ಹೊಸ ಕಾರ್ಯಕ್ರಮ ಇದಾಗಿದೆ. ಹಿಂಬರಹ ಕೊಡುವುದಕ್ಕೆ ಪ್ರತ್ಯೇಕ ಕಚೇರಿ ಆರಂಭವಾಗಬೇಕಿದೆ. ಕಾನೂನು ಬಾಹಿರ ಕಾರ್ಯಗಳು ಆಗುವುದಿಲ್ಲ ಎಂದು ಅರ್ಜಿದಾರರಿಗೆ ತಿಳಿಯಪಡಿಸಬೇಕು. ಎರಡು ಮೂರು ಜಿಲ್ಲೆಗಳ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.
ಶಾಸಕರಾದ ಎನ್.ಎಚ್. ಕೋನರಡ್ಡಿ ಮಾತನಾಡಿ, ಹುಬ್ಬಳ್ಳಿ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು. ನವಲಗುಂದ ಕ್ಷೇತ್ರದಲ್ಲಿ ಪ್ರಜಾ ಸೇವೆ ಇಲಾಖೆಯನ್ನು ಆರಂಭಿಸಲಾಗಿದೆ. ಭಾರತ ಜೋಡೋ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ದೊರೆಯುತ್ತಿದೆ. ಬರ ಪೀಡಿತ ತಾಲೂಕು ಘೋಷಣೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಫ್.ಎಚ್. ಜಕ್ಕಪ್ಪನವರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಬರ್ಟ ದದ್ದಾಪುರಿ, ಹೆಸ್ಕಾಂ ಅಧ್ಯಕ್ಷ ಅಜೀಮ್ ಪೀರ್ ಖಾದ್ರಿ, ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್, ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಧಾರವಾಡ ಜಿಲ್ಲಾ ಪಂಚಾಯತ ಸಿಇಒ ಭುವನೇಶ ಪಾಟೀಲ, ಹಾವೇರಿ ಜಿಲ್ಲಾ ಪಂಚಾಯತ ಸಿಇಒ ದಲಜೀತ ಕುಮಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






















