ಕೊಪ್ಪಳ: ಎರಡು ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಇಲ್ಲದಿದ್ದರೆ ಬಸವರಾಜ ರಾಯರಡ್ಡಿ ಎಂದರೆ ಯಾರಿಗೂ ಗೊತ್ತಿರಲಿಲ್ಲ. ಸೌದಿ ಅರೇಬಿಯಾ, ಇರಾನ್‌ನಲ್ಲೆಲ್ಲಾ ನನಗೆ ಪ್ರಚಾರ ಸಿಕ್ಕಿದೆ. ಇದನ್ನು ಸಿಎಂ ಸಹ ಹೇಳಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಎರಡು ದಿನ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದರು. ಬಿಹಾರದ ಸಂಸದ ದ್ಯಾನಿಶ್ ಅಲಿ ಫೋನ್ ಮಾಡಿದ್ದರು. ಮಂಗಳವಾರ ಸಿಎಂ ಡಿ.ಕೆ. ಶಿವಕುಮಾರ ಕೂಡ ಕೇಳಿದರು. ಅಲ್ ಝಜೀರಾದಲ್ಲೂ ತೋರಿಸಿದ್ದಾರೆ. ಹಾಗಾಗಿ ನಿಮಗೆ ಥ್ಯಾಂಕ್ಸ್. ಜನಾನೇ ದೇವರು ಎಂದರು.
ನಾನು ದೇವಸ್ಥಾನಕ್ಕೆ ಹೋಗುವುದಿಲ್ಲವೆಂದು ಏಕೆ ಹೇಳಿದೆ ಎಂದರೆ ನಾನು ಬೇಡಿಕೊಳ್ಳುವುದಕ್ಕೆ ಹೋಗುವುದಿಲ್ಲ. ನನ್ನ ಸ್ವಾರ್ಥಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದಿಲ್ಲ. ಇವತ್ತು ದೇವಸ್ಥಾನಕ್ಕೆ ಹೋಗಿದ್ದು ಮಳೆ ಬರಲೆಂದು ಕೇಳುವುದಕ್ಕೆ ಎಂದರು.
ನಾನು ಮಾನಸ ಸರೋವರಕ್ಕೂ ಹೋಗಿದ್ದೇನೆ. ಶಕ್ತಿ ಪೀಠ ಕಾಮಾಕ್ಯಕ್ಕೆ ಹೋಗಿದ್ದೇನೆ. ನಾಲ್ಕೈದು ಶಕ್ತಿಪೀಠಕ್ಕೆ ಹೋಗಿ ಸ್ಟಡಿ ಮಾಡಿದ್ದೇನೆ. ವೈಷ್ಣವಿ ದೇವಿಗೆ ಸವದಿ, ನಾನು, ಆರ್. ಅಶೋಕ ಎಲ್ಲರೂ ಹೋಗಿದ್ದೆವು ಎಂದು ವೈಷ್ಣವಿ ದೇವಿಯ ಫೊಟೋ ತೋರಿಸಿದರು.
ಜುಡಾಯಿಸಂ ಬಗ್ಗೆ ನಾನು ಸ್ಟಡಿ ಮಾಡಿದ್ದೇನೆ. ಜೈನಿಸಂ ಬಗ್ಗೆ ಸ್ಟಡಿ ಮಾಡಿದ್ದೇನೆ. ಸಾರಾನಾಥಗೂ ಹೋಗಿದ್ದೇನೆ. ಬುದ್ಧ ತಪಸ್ಸು ಮಾಡಿದ ಮರದ ಕೆಳಗೆ ನಾನು ಕುಳಿತು ಬಂದಿದ್ದೇನೆ. ಉಪನಿಷತ್ತು ಓದಿದ್ದೇನೆ. ವೇದಗಳ ಬಗ್ಗೆ ಓದಿದ್ದೇನೆ. ಏಸು ಕ್ರಿಸ್ತನ ಸಮಾಧಿಗೆ ಹೋಗಿದ್ದೇನೆ. ನಾನು ಮುಸ್ಲಿಂ ಧರ್ಮದ ಸಾಮೂಹಿಕ ಕಾರ್ಯಕ್ರಮದಲ್ಲಿ ಎಲ್ಲ ಧರ್ಮ ಶ್ರೇಷ್ಠ ಎಂದು ಹೇಳಿದ್ದು, ಮುಸ್ಲಿಂ ಸಮುದಾಯದ ಸಭೆಯಲ್ಲಿ ಅವರನ್ನು ಬಯ್ಯುವುದಕ್ಕೆ ಆಗುತ್ತದೆಯಾ? ಎಂದು ಪ್ರಶ್ನಿಸಿದರು.
ಕುರಾನ್‌ನಲ್ಲಿ ಇರುವುದನ್ನು ನಾನು ಹೇಳಿದ್ದೇನೆ. ಹಜ್‌ಉಮ್ರಾಗೆ ಹೋಗುವುದಕ್ಕೆ ಬರುವುದಿಲ್ಲ. ನಾನು ಮುಸ್ಲಿಂ ಅಲ್ಲ. ನಾನು ಮತಾಂತರ ಆಗುವುದಿಲ್ಲ ಎಂದಿದ್ದೇನೆ. ಶರಣತತ್ವದವನು ನಾನು. ಎಲ್ಲ ಧರ್ಮಗಳ ಸಾರ ಒಂದೇ. ದುಡ್ಡು ತಿಂದರೆ ಮಾತ್ರ ಕರಪ್ಟ್ ಅಲ್ಲ. ನಾನು ಇವಾಗ ಸುತ್ತೂರ ಮಠಕ್ಕೆ ಹೋಗುತ್ತಿದ್ದೇನೆ. ನನ್ನ ಹೆಂಡತಿ, ಮಗಳು ಚಾಮುಂಡೇಶ್ವರಿಗೆ ಕರೆದಿದ್ದಾರೆ. ಅವರು ಕರೆದರೆ ಹೋಗಬೇಕಲ್ಲ? ಎಂದರು.




















