ಬೆಂಗಳೂರು ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಸಂಚಾರ ಆರಂಭಕ್ಕೆ ಮತ್ತಷ್ಟು ಹತ್ತಿರವಾಗಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಸೆಪ್ಟೆಂಬರ್‌ನಲ್ಲೇ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ವಿಶ್ವಾಸವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿದ ತಕ್ಷಣ ಮಾರ್ಗವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 2ರಂದು ಕೃಷ್ಣಬೈರೇಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ. ಕೃಷ್ಣಪ್ಪ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಪಿಂಕ್ ಲೈನ್‌ನ ಕಾಮಗಾರಿ ಮತ್ತು ಸಂಚಾರ ಸಿದ್ಧತೆಗಳನ್ನು ಪರಿಶೀಲಿಸಿದರು. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು ನಿಲ್ದಾಣದ ಕಾಮಗಾರಿ, ಸುರಕ್ಷತಾ ವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೋ ರೈಲಿನ ಲೋಕೋ ಪೈಲಟ್ ಕ್ಯಾಬಿನ್‌ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಪ್ರಯಾಣಿಸಿ ಮಾರ್ಗದ ಸಿದ್ಧತೆಯನ್ನು ಪರಿಶೀಲಿಸಿದರು. ಈ 7.5 ಕಿ.ಮೀ. ಮಾರ್ಗವು ಬನ್ನೇರುಘಟ್ಟ ರಸ್ತೆಯ ಪ್ರಮುಖ ಭಾಗಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವುದರಿಂದ, ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ ಈ ಭಾಗದ ರಸ್ತೆ ಸಂಚಾರದ ಮೇಲಿನ ಒತ್ತಡವೂ ಕಡಿಮೆಯಾಗುವ ನಿರೀಕ್ಷೆಯಿದೆ.
ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಪಿಂಕ್ ಲೈನ್ ಅನ್ನು ಸೆಪ್ಟೆಂಬರ್ ಅಂತ್ಯದೊಳಗೆ ಉದ್ಘಾಟಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಮಾರ್ಗದ ವಾಣಿಜ್ಯ ಸಂಚಾರ ಆರಂಭಕ್ಕೆ ಅಂತಿಮ ಸುರಕ್ಷತಾ ಅನುಮತಿಗಳು ಪ್ರಮುಖವಾಗಿವೆ. CMRS ಅಧಿಕಾರಿಗಳೊಂದಿಗೆ ಸುರಕ್ಷತಾ ಅನುಮತಿ ಹಾಗೂ ಗಡುವಿನ ಕುರಿತು ಚರ್ಚಿಸಲಾಗಿದ್ದು, ಮುಂದಿನ ಸುಮಾರು 15 ದಿನಗಳಲ್ಲಿ ರೋಲಿಂಗ್ ಸ್ಟಾಕ್ ಅನುಮತಿ ದೊರೆಯುವ ನಿರೀಕ್ಷೆಯಿದೆ. ಅದರ ಬಳಿಕ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲು ಅಗತ್ಯವಿರುವ ಇತರ ಅನುಮತಿಗಳ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಪಿಂಕ್ ಲೈನ್ ಆರಂಭವಾದರೆ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗಲಿದೆ. ದಕ್ಷಿಣ ಬೆಂಗಳೂರಿನ ಸಾರ್ವಜನಿಕ ಸಾರಿಗೆ ಸಂಪರ್ಕ ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ವೇಗವಾದ ಪರ್ಯಾಯ ಸಾರಿಗೆ ವ್ಯವಸ್ಥೆ ದೊರೆಯಲಿದೆ.
ಪಿಂಕ್ ಲೈನ್ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಗಡುವುಗಳು ಮುಂದೂಡಿಕೆಯಾಗಿದ್ದವು. ಇದೀಗ ಕಾಳೇನ ಅಗ್ರಹಾರ–ತಾವರೆಕೆರೆ ವಿಭಾಗ ಉದ್ಘಾಟನೆಗೆ ಸಿದ್ಧವಾಗಿರುವುದರಿಂದ, ಅಂತಿಮ ಅನುಮತಿಗಳು ಶೀಘ್ರ ದೊರೆತರೆ ಸೆಪ್ಟೆಂಬರ್‌ನಲ್ಲೇ ಪ್ರಯಾಣಿಕರ ಸಂಚಾರ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.
ಇದೇ ವೇಳೆ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ಸಂಚಾರ ಸಮಸ್ಯೆಗೆ ಸಾರ್ವಜನಿಕ ಸಾರಿಗೆ ವಿಸ್ತರಣೆಯೇ ಪ್ರಮುಖ ಪರಿಹಾರವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ವೈಜ್ಞಾನಿಕ ಹಾಗೂ ಸುಸ್ಥಿರ ಯೋಜನೆಗಳಿಗೆ ನಾಗರಿಕರು ಮತ್ತು ವಿರೋಧ ಪಕ್ಷಗಳು ಬೆಂಬಲ ನೀಡಬೇಕು ಎಂದು ಹೇಳಿರುವ ಅವರು, ‘ಟನಲ್ ರೋಡ್’ನಂತಹ ಯೋಜನೆಗಳ ಬದಲಿಗೆ ಬೆಂಗಳೂರಿಗೆ ಇನ್ನಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















