SK Home Ad
Home ನಮ್ಮ ಜಿಲ್ಲೆ ಧಾರವಾಡ ಈ ಊರೇ ಬೇಡ ಎಂದು ಕಾಲ್ಕಿತ್ತದ್ದವನ ಬೆನ್ನು ಬಿಡದ ಸಾವು

ಈ ಊರೇ ಬೇಡ ಎಂದು ಕಾಲ್ಕಿತ್ತದ್ದವನ ಬೆನ್ನು ಬಿಡದ ಸಾವು

0
2

ಹುಬ್ಬಳ್ಳಿ: ಹತ್ಯೆ ಯತ್ನದಲ್ಲಿ ಅದ್ಹೇಗೋ ಬಚಾವಾಗಿ ಕೊನೆಗೆ ಈ ಊರೇ ಬೇಡ. ಎಲ್ಲಾದರೂ ದೂರ ಹೋಗಿ ಜೀವ ಉಳಿಸಿಕೊಂಡು ಬದುಕಿದರಾಯ್ತು ಎಂದು 8 ವರ್ಷಗಳ ಹಿಂದೆ ವಾಣಿಜ್ಯನಗರಿಯನ್ನು ತೊರೆದು ಕಲಘಟಗಿ ತಾಲೂಕಿನ ಬೋಗೇನಾಗರಕೊಪ್ಪದಲ್ಲಿದ್ದರೂ ಸಾವು ಬೆನ್ನು ಬಿಟ್ಟಿರಲಿಲ್ಲ!

ಈ ಹತ್ಯೆ ಭೀತಿಯಿಂದಲೇ ವಾಣಿಜ್ಯ ನಗರಿಗೇ 8 ವರ್ಷದಿಂದ ಕಾಲೇ ಇಡದ ವ್ಯಕ್ತಿ ಅದ್ಯಾಕೊ ಶುಕ್ರವಾರ ಹುಬ್ಬಳ್ಳಿಗೆ ಕಾಲಿಟ್ಟು ಬಿಟ್ಟಿದ್ದ. ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಈತನ ಹೆಡೆಮುರಿ ಕಟ್ಟಲು ಹೊಂಚು ಹಾಕಿ ಕುಳಿತಿದ್ದವರಿಗೆ ಅದ್ಹೇಗೆ ತಿಳಿಯಿತೊ ಏನೊ ಶುಕ್ರವಾರ ಮಟ ಮಟ ಮಧ್ಯಾಹ್ನ 1 ಗಂಟೆಗೆ ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಾಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದು ಅಟ್ಟಹಾಸ ಮೆರೆದಿದ್ದಾರೆ.

ಈ ಕೃತ್ಯವನ್ನು ಕಂಡ ರಸ್ತೆಯಲ್ಲಿ ಹೋಗುವ ಜನ, ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಕೊಲೆಗಾರರ ಅಟ್ಟಹಾಸ ಕಂಡು ಹತ್ಯೆಯಾಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಧಾವಿಸಿಲ್ಲ. ಕೊಲೆಗಾರರು ತಮಗೇ ಯಾರದೇ ಭಯವಿಲ್ಲ, ಯಾರೂ ತಮ್ಮತ್ತ ಸುಳಿಯಲು ಸಾಧ್ಯವೇ ಎಲ್ಲ ಎಂಬಂತೆ ಕೃತ್ಯ ಮುಗಿಸಿ ತೆರಳಿದ್ದಾರೆ. ಈಚೆಗಿನ ವರ್ಷದಲ್ಲಿ ವಾಣಿಜ್ಯನಗರಿಯಲ್ಲಿ ಅದೂ ಪ್ರಶಾಂತ ಪ್ರದೇಶವಾದ ಲಿಂಗರಾಜನಗರ ಸಿದ್ದೇಶ್ವರ ಪಾರ್ಕ್ ಕಡೆ ಇಂತಹ ಕೃತ್ಯ ನಡೆದಿರುವುದು ಬೆಚ್ಚಿಬೀಳಿಸಿದೆ.

ಹೊಂಚು ಹಾಕಿ ಮುಹೂರ್ತ ಇಟ್ಟಿದ್ದರೆ?: ಹತ್ಯೆಗೀಡಾದ ದಾದಾಪೀರ್ ಸಹೋದರ ಸಾದಿಕ್‌ನೇ ಹೇಳಿದ ಹಾಗೆ 8 ವರ್ಷ ಹುಬ್ಬಳ್ಳಿಗೆ ಕಾಲಿಡದೇ ಇದ್ದ ದಾದಾಪೀರ ಅದ್ಹೇಗೆ ಶುಕ್ರವಾರ ನಗರಕ್ಕೆ ಬಂದ? ಸಾವು ತನ್ನ ಬೆನ್ನು ಬಿದ್ದಿದೆ ಎಂಬುದು ನಿಶ್ಚಿತವಾಗಿದ್ದರೂ ಅದ್ಯಾವ ಕಾರಣಕ್ಕೆ 8 ವರ್ಷದ ನಂತರ ನಗರಕ್ಕೆ ಬಂದ ಬಿಟ್ಟ? ಕೊಲೆಗಾರರು ಈತನನ್ನು ನಗರಕ್ಕೆ ಕರೆ ತರಲು ಸಂಚು ರೂಪಿಸಿದ್ದರೆ? ಆತನೇ ಬಂದಿದ್ದನೇ ಅಥವಾ ಇನ್ಯಾರಾದರೂ ಆತನನ್ನು ನಗರಕ್ಕೆ ಪುಸಲಾಯಿಸಿ ಕರೆ ತಂದಿದ್ದರೆ ಅಥವಾ ಈತನೇ ನಗರಕ್ಕೆ ಬಂದ ವಿಷಯ ತಿಳಿದು ಕೊಲೆಗಾರರು ಬೆನ್ನು ಬಿದ್ದು ರಸ್ತೆಯಲ್ಲಿ ಅಟ್ಟಾಡಿಸಿ ಹತ್ಯೆಗೈದರೆ ಎಂಬುದು ಸೇರಿದಂತೆ ನಾನಾ ಅನುಮಾನಗಳು ಈ ಕೊಲೆ ಕೃತ್ಯದ ಹಿಂದೆ ವ್ಯಕ್ತವಾಗುತ್ತಿವೆ.

ಕೊಲೆಗಾರರು ದಾದಾಪೀರ್ ಎಂಬುವವನ ಮುಖ ಗುರುತೇ ಸಿಗಬಾರದು ಎಂಬುವಷ್ಟರ ಮಟ್ಟಿಗೆ ಮಾರಾಕಾಸ್ತ್ರಗಳಿಂದ ಮುಖಕ್ಕೆ ಪದೇ ಪದೇ ಕೊಚ್ಚಿ ಹಾಕಿದ್ದಾದರೂ ಏಕೆ? ತನಿಖೆಯಿಂದಲೇ ಗೊತ್ತಾಗಬೇಕಾಗಿದೆ.

ಹತ್ಯೆಗೂ ಮುನ್ನ ಅಟ್ಟಾಡಿಸಿದ್ದ ಕೊಲೆಗಾರರು: ದಾದಾಪೀರನನ್ನು ಏಕಾಏಕಿ ರಸ್ತೆಯಲ್ಲಿ ಅಡ್ಡಗಟ್ಟಿ ಹತ್ಯೆಗೈದಿದ್ದಲ್ಲ. ಆತನನ್ನು ಕೊಲೆಗಾರರು ಎಲ್ಲೋ ಬೇರೆ ಕಡೆಯಿಂದ ಬೆನ್ನಟ್ಟಿ ಬಂದಿದ್ದಾರೆ ಅಥವಾ ಅಲ್ಲಿ ಪೆಟ್ಟು ತಿಂದು ಬಚಾವಾಗಲು ಎದ್ದು ಬಿದ್ದು ತಪ್ಪಿಸಿಕೊಳ್ಳಲು ಓಡಿದ್ದಾನೆ (ಪ್ಯಾಂಟಿನ ಮೇಲೆ ರಸ್ತೆಯಲ್ಲಿ ಬಿದ್ದು ಮಣ್ಣು ಮೆತ್ತಿರುವುದು ಕಾಣುತ್ತದೆ.). ಓಡಿ ಬರುವ ಭರದಲ್ಲಿ ಚಪ್ಪಲಿ ಎಲ್ಲೊ ಬಿದ್ಹೋಗಿವೆ (ಕೊಲೆಯಾದಾಗ ದಾದಾಪೀರ ಕಾಲಿನಲ್ಲಿ ಚಪ್ಪಲಿ ಇಲ್ಲ). ಬರಿಗಾಲಿನಲ್ಲಿಯೇ ಓಡಿ ಓಡಿ ಬರುವಾಗ ರಸ್ತೆಯಲ್ಲಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದು ಬೀಳುತ್ತಿದ್ದಂತೆಯೇ ಆತನ ಬೆನ್ನು ಬಿದ್ದಿದ್ದ ಕೊಲೆಗಾರರು ತಮ್ಮ ಕೃತ್ಯ ಎಸಗಿ ದಾದಾಪೀರನ ಕಥೆ ಮುಗಿಸಿದ್ದಾರೆ. ಈಗ ತನಿಖೆ ಶುರು ಮಾಡಿರುವ ಪೊಲೀಸರು ಕೊಲೆಗಾರರ ಕಥೆ ಏನು ಎಂಬುದನ್ನು ಹೇಳಬೇಕಾಗಿದೆ.

ಕೊಲೆ ಕೃತ್ಯ, ಕೊಲೆಯಾದ ವ್ಯಕ್ತಿ ಹಿನ್ನೆಲೆ ಏನು?: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿ ವ್ಯಕ್ತಿಯೊಬ್ಬನನ್ನು ನಡು ರಸ್ತೆಯಲ್ಲೇ 40ಕ್ಕೂ ಹೆಚ್ಚು ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ನಿವಾಸಿ ದಾದಪೀರ್ ಇಸ್ಮಾಯಿಲ್‌ಸಾಬ ಉದಯಕರ್ (33) ಕೊಲೆಯಾದವರು. ಮೂಲತಃ ಹುಬ್ಬಳ್ಳಿಯ ಗಿರಿಯಾಲ್ ರೋಡ ಶಿವಸೋಮೇಶ್ವರ ನಗರದವರಾಗಿದ್ದಾರೆ. ಲಿಂಗರಾಜನಗರದ ಬನಶಂಕರಿ ಬಡಾವಣೆ ಬಳಿ ಇದ್ದಾಗ ಮೂವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಳ್ಳಲು ಬೈಕ್ ಬಿಟ್ಟು ಓಡಿದ ದಾದಪೀರ್‌ನನ್ನು ಹಿಂಬಾಲಿಸಿ ನಡು ರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮೊಬೈಲ್ ಸಂಖ್ಯೆ ಆಧರಿಸಿ ಪತ್ತೆ ಚುರುಕು: ಮೊಬೈಲ್ ಸಂಖ್ಯೆ ಹಾಗೂ ಸಿಸಿಟಿವಿ ಕ್ಯಾಮೆರಾ ಆಧರಿಸಿ ಅವರ ಪತ್ತೆಗೆ ಯೋಜನೆ ರೂಪಿಸಲಾಗಿದ್ದು, ಎಸಿಪಿ ಶಿವಾನಂದ ಚಲವಾದಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ತನಿಖೆ ಚುರುಕುಗೊಳಿಸಲಾಗಿದೆ. ಕೆಎಂಸಿಆರ್‌ಐ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಟೋದಲ್ಲಿ ಬಂದು ಪರಾರಿ: ಮೂವರು ಆರೋಪಿಗಳು ಆಟೋದಲ್ಲಿ ಬಂದಿದ್ದರೆನ್ನಲಾಗಿದ್ದು, ಕೊಲೆ ಮಾಡಿದ ಬಳಿಕ ಸೆಟ್ಲ್ಮೆಂಟ್ ಕಡೆ ಹೋಗಿ, ಅಲ್ಲಿ ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಆಟೋವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಳೇ ದ್ವೇಷಕ್ಕೆ ಪ್ರತೀಕಾರ ಶಂಕೆ: 2015ರಲ್ಲಿ ಕಸಬಾಪೇಟೆ ಠಾಣಾ ವ್ಯಾಪ್ತಿಯಲ್ಲಿ ಮಾರುತಿ ಚಲವಾದಿ ಎಂಬುವವನ ಕೊಲೆ ಪ್ರಕರಣದಲ್ಲಿ ದಾದಾಪೀರ್ (ಈಗ ಕೊಲೆಯಾಗಿರುವ ವ್ಯಕ್ತಿ) 3ನೇ ಆರೋಪಿಯಾಗಿದ್ದ. 2017ರಲ್ಲಿ ದಾದಾಪೀರ್ ಮತ್ತು ಕುಟುಂಬದ ಮೇಲೆ ಕೊಲೆ ಯತ್ನ ನಡೆದಿತ್ತು. ಆಗ 8 ಜನರ ವಿರುದ್ಧ ದೂರು ದಾಖಲಾಗಿತ್ತು. ಈ ಘಟನೆ ಆದ ಬಳಿಕ ನಂತರ ದಾದಾಪೀರ್ ಊರು ಬಿಟ್ಟು ಭೋಗೇನಾಗರಕೊಪ್ಪದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅಂದು ದಾದಾಪೀರ್ ಹತ್ಯೆ ಮಾಡಿದ ವ್ಯಕ್ತಿಯ ಸಂಬಂಧಿಕರೆನ್ನಲಾದ ಮೂವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಶುಕ್ರವಾರ ಈ ಕೃತ್ಯ ಎಸಗಿರಬಹುದು ಎಂದು ಮೃತನ ಸಹೋದರ ಸಾದಿಕ್ ಉದಯಕರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.