ದಾವಣಗೆರೆ: ಪ್ರಕೃತಿ ಮುನಿದರೆ ಮನುಷ್ಯ ಎಷ್ಟೇ ಶ್ರೀಮಂತ, ಬಲಿಷ್ಠನಾಗಿದ್ದರೂ ಕ್ಷಣಾರ್ಧದಲ್ಲಿ ಅಸಹಾಯಕನಾಗುತ್ತಾನೆ. ಹೀಗಾಗಿ ಆಸ್ತಿ-ಅಂತಸ್ತಿಗಿಂತ ಮಾನವೀಯತೆ, ಸೇವಾ ಮನೋಭಾವ, ಪರಸ್ಪರ ಪ್ರೀತಿ ಮತ್ತು ಸಂಸ್ಕಾರವೇ ಬದುಕಿನ ನಿಜವಾದ ಸಂಪತ್ತು ಎಂದು ಮೂಡಬಿದರೆ ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ದಾವಣಗೆರೆಯ ವಿನೋಬನಗರದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಹಾಗೂ ಮಡಿಕಟ್ಟೆ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ದುರಂತದ ಕರುಣಾಜನಕ ದೃಶ್ಯಗಳನ್ನು ಪ್ರಸ್ತಾಪಿಸಿದ ಸ್ವಾಮೀಜಿ, ಪ್ರಕೃತಿಯ ಮುಂದೆ ಮನುಷ್ಯನ ಅಸಹಾಯಕತೆಯನ್ನು ಮನಮುಟ್ಟುವಂತೆ ವಿವರಿಸಿದರು.
ಪ್ರವಾಹದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು, ನಡೆಯಲೂ ಸಾಧ್ಯವಾಗದ ತನ್ನ ಪುಟ್ಟ ತಂಗಿಯನ್ನು ಬೆನ್ನಿಗೆ ಕಟ್ಟಿಕೊಂಡು ದಿಕ್ಕು ತೋಚದೆ ಸಾಗುತ್ತಿದ್ದ ಬಾಲಕನ ದೃಶ್ಯವನ್ನು ನೆನಪಿಸಿಕೊಂಡ ಅವರು, “ಇಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿ, ಬಂಧು-ಬಳಗವನ್ನು ಕಳೆದುಕೊಂಡು ತಂಗಿಯನ್ನು ಬೆನ್ನಿಗೆ ಕಟ್ಟಿಕೊಂಡು ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂಬುದೇ ತಿಳಿಯದ ಆ ಮಗುವಿನ ಸ್ಥಿತಿ ನಮ್ಮ ಕರುಳನ್ನು ಕಿವುಚುವಂತಿತ್ತು” ಎಂದು ಭಾವುಕರಾದರು.
ಅದೇ ದುರಂತದಲ್ಲಿ ಪ್ರವಾಹದ ನೀರಿನಲ್ಲಿ ಮೃತದೇಹಗಳು ಹಾಗೂ ಗ್ಯಾಸ್ ಸಿಲಿಂಡರ್‌ಗಳು ತೇಲಿ ಬರುತ್ತಿದ್ದಾಗ ಕೆಲವರು ಮೃತದೇಹಗಳನ್ನು ಕಡೆಗಣಿಸಿ ಸಿಲಿಂಡರ್‌ಗಳನ್ನು ಸಂಗ್ರಹಿಸುತ್ತಿದ್ದ ದೃಶ್ಯವೂ ಮಾನವೀಯತೆಯ ಅಧಃಪತನವನ್ನು ತೋರಿಸುತ್ತದೆ ಎಂದರು.
ಮಹಿಳೆಯೊಬ್ಬರ ಮೃತದೇಹವನ್ನು ಎಳೆದು, ಕಿವಿಯಲ್ಲಿದ್ದ ಚಿನ್ನಾಭರಣವನ್ನು ಕಸಿದುಕೊಂಡು ಶವವನ್ನು ಅಲ್ಲಿಯೇ ಬಿಟ್ಟುಹೋದ ಅಮಾನವೀಯ ಘಟನೆಯನ್ನು ಉಲ್ಲೇಖಿಸಿದ ಸ್ವಾಮೀಜಿ, “ಎಲ್ಲಿ ಹೋಯಿತು ಮನುಷ್ಯತ್ವ? ಆ ಚಿನ್ನ ಎಷ್ಟು ದಿನ ಬರುತ್ತದೆ? ಮತ್ತೊಂದು ದುರಂತ ಬಂದರೆ ಆ ಚಿನ್ನವೂ ಮನುಷ್ಯನೊಂದಿಗೆ ಹೋಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಸೇವೆಯೇ ಇಲ್ಲದಿದ್ದರೆ ಬದುಕು ವ್ಯರ್ಥ: ನಾವು ಈ ಭೂಮಿಯಲ್ಲಿ ಶಾಶ್ವತವಾಗಿ ಉಳಿಯುವವರಲ್ಲ. ಪ್ರಕೃತಿ ಒಂದು ಕ್ಷಣ ಮುನಿದರೂ ನಮ್ಮ ಬದುಕು ಅಂತ್ಯವಾಗಬಹುದು. ಆದ್ದರಿಂದ ಬದುಕಿರುವಷ್ಟು ದಿನ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ, ಪ್ರೀತಿಸುವ ಹಾಗೂ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
“ನಾವು ಯಾವುದನ್ನೂ ನಮ್ಮೊಂದಿಗೆ ಕೊಂಡೊಯ್ಯಲು ಬಂದವರಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಸಿ ಬದುಕುವುದನ್ನು ಕಲಿಯದಿದ್ದರೆ ನಮಗೆ ದೊರೆತ ಆಯುಷ್ಯವನ್ನು ವ್ಯರ್ಥವಾಗಿ ಕಳೆದಂತಾಗುತ್ತದೆ” ಎಂದರು.
ಇಂದಿನ ಸಮಾಜದಲ್ಲಿ ಪ್ರತಿಸ್ಪಂದನೆಯ ಕೊರತೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮತ್ತೊಬ್ಬರ ನೋವು-ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಮನುಷ್ಯತ್ವವೇ ಇಲ್ಲದಿದ್ದರೆ ಸಮಾಜದಲ್ಲಿ ಪರಸ್ಪರ ಸಹಕಾರ ಮತ್ತು ಸೌಹಾರ್ದತೆ ಸಾಧ್ಯವಿಲ್ಲ ಎಂದು ಹೇಳಿದರು.
ಶಿವಶರಣ ಮಡಿವಾಳ ಮಾಚಿದೇವರ ವಚನಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಮನುಷ್ಯತ್ವ ಹೇಗಿರಬೇಕು, ವ್ಯಕ್ತಿ ಹೇಗೆ ಸದೃಢವಾಗಿ ಬದುಕಬೇಕು, ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಹೇಗೆ ಬೆಳೆಸಿಕೊಳ್ಳಬೇಕು ಹಾಗೂ ತನ್ನ ರಕ್ಷಣೆಯ ಜತೆಗೆ ಸಮಾಜದ ಬಗ್ಗೆಯೂ ಕಾಳಜಿ ವಹಿಸಬೇಕು ಎಂಬುದನ್ನು ವಚನಗಳು ಸಾರುತ್ತವೆ ಎಂದು ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಮಾತು, ನಡೆ, ಸಂಸ್ಕಾರ ಹಾಗೂ ಮಾನವೀಯತೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವುದು ಪಾಲಕರು ಹಾಗೂ ಸಮಾಜದ ಜವಾಬ್ದಾರಿ ಎಂದು ಅವರು ತಿಳಿಸಿದರು.





















