SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹಳೇ ದ್ವೇಷಕ್ಕೆ ರಣಾಂಗಣವಾದ ರಸ್ತೆ: ತಲ್ವಾರ್, ದೊಣ್ಣೆ ಹಿಡಿದು ಹೊಡೆದಾಡಿದ ಯುವಕರು

ಹಳೇ ದ್ವೇಷಕ್ಕೆ ರಣಾಂಗಣವಾದ ರಸ್ತೆ: ತಲ್ವಾರ್, ದೊಣ್ಣೆ ಹಿಡಿದು ಹೊಡೆದಾಡಿದ ಯುವಕರು

0
5

ದಾವಣಗೆರೆ: ನಡುರಸ್ತೆಯಲ್ಲಿ ಎರಡು ಗುಂಪಗಳ ನಡುವೆ ಮಾರಾಮಾರಿ ನಡೆದಿದೆ. ತಲವಾರ್, ದೊಣ್ಣೆ ಹಿಡಿದು ಯುವಕರು ಬಡಿದಾಡಿಕೊಂಡು ತೀವ್ರವಾಗಿ ಗಾಯಗಳಾಗಿರುವ ಘಟನೆ ದಾವಣಗೆರೆಯ ಬಿಡಿ ಲೇಔಟ್‌ನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದ್ದರಿಂದ ಹಳೇ ದಾವಣಗೆರೆ ಜನ ಬೆಚ್ಚಿಬಿದ್ದಿದ್ದಾರೆ. ಹಳೇ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ಆಗಿದೆ. ತಲ್ವಾರ್, ದೊಣ್ಣೆ ಹಿಡಿದು ಪರಸ್ಪರ ಯುವಕರು ಹಲ್ಲೆ ಮಾಡಿಕೊಂಡಿದ್ದಾರೆ.

ಮೊಯ್ದಿನ್, ಜುನೇದ್ ಇಬ್ಬರು ಸಹೋದರರಾಗಿದ್ದು, ಇರ್ಫಾನ್, ನವಾಜ್, ತೌಸೀಫ್ ಒಟ್ಟು ಐವರಿಗೆ ಗಲಾಟೆಯಲ್ಲಿ ಗಾಯಗಳಾಗಿದೆ. 20ಕ್ಕೂ ಹೆಚ್ಚು ಯುವಕರ ಗುಂಪಿನಿಂದ ಮತ್ತೊಂದು ಗುಂಪಿನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಘಟನೆ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದಾವಣಗೆರೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿರುವುದು ಇಡೀ ಹಳೇ ದಾವಣಗೆರೆ ಭಾಗದ ಜನರನ್ನು ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಐವರ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಆಜಾದ್ ನಗರ ಠಾಣೆಯ ಪಿಐ ವಸಂತಕುಮಾರ್ ಮಾತನಾಡಿ, ಎರಡು ಪ್ರತಿಷ್ಠಿತ ಕುಟುಂಬಗಳ ನಡುವೆ ಈ ಗಲಾಟೆ ನಡೆದಿದೆ. ಹಳೇ ದ್ವೇಷ ಹಿನ್ನಲೆಯಲ್ಲಿ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಈ ಹಿಂದೆ ಹೀಗೆ ಹೊಡೆದಾಡಿಕೊಂಡ ಬೆನ್ನಲ್ಲೇ ಇವರ ಮೇಲೆ ಪ್ರಕರಣ ದಾಖಲಾಗಿದ್ದವು. ರಾಜೀ ಮಾಡಿಕೊಳ್ಳಲು ಒಂದು ಕುಟುಂಬ ಮುಂದೆ ಬಂದಿತ್ತು. ಮತ್ತೊಂದು ಕುಟುಂಬ ರಾಜೀಯಾಗಿಲ್ಲ. ಆದರೂ ಅವರ ನಡುವೆ ವೈಮನಸ್ಸು ಇತ್ತು. ನಿನ್ನೆ ರಾತ್ರಿ ಯಾವುದೋ ಒಂದು ವಿಚಾರ ನೆಪ ಮಾಡಿಕೊಂಡು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈಗಾಗಲೇ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ 6 ಜನರನ್ನು ಬಂಧಿಸಲಾಗಿದೆ. ಈ ಘಟನೆ ಸಂಬಂಧ ಕೌಂಟರ್ ಕೇಸ್ ಆಗುವ ಸಂಭವ ಇದೆ. ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಮಾತನಾಡಿ, “ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಒಂದು ಗುಂಪು ಹಫ್ತಾ ನಮಗೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಗುಂಪಿನ ಯುವಕರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ 6 ಜನರನ್ನು ಬಂಧಿಸಲಾಗಿದೆ. ಗಲಾಟೆಯಲ್ಲಿ ಗಾಂಜಾ ಘಾಟು ಅಡಗಿದೆಯಾ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ” ಎಂದರು.