ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಕಳಪೆ ಗುಣಮಟ್ಟದ ಆಹಾರ ಮತ್ತು ಇತರೆ ಸೌಲಭ್ಯ ಕಲ್ಪಿಸದಿರುವುದನ್ನು ಖಂಡಿಸಿ ಕೈದಿಗಳು ರವಿವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ಮೂಲದ ಕೈದಿ ಆನಂದಕುಮಾರ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಕೈದಿಗಳು ಮುಂಜಾನೆಯಿಂದ ಪ್ರತಿಭಟನೆ ನಡೆಸಿದ್ದಾರೆ. ಐಪಿಎಸ್ ಅಧಿಕಾರಿ ಅಲೋಕಕುಮಾರ ಅವರನ್ನು ಮೆಚ್ಚಿಸಲು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಕಳಪೆ ಗುಣಮಟ್ಟದ ಆಹಾರ, ವೈದ್ಯಕೀಯ ಉಪಚಾರ ನೀಡದೇ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಜೈಲಿನಲ್ಲಿ ಕೈದಿಗಳಿಗೆ ಸಾಂಕ್ರಾಮಿಕ ಜ್ವರ ಹರಡುತ್ತಿದೆ. ಅಲ್ಲದೇ ಸರಿಯಾದ ಆಹಾರ ನೀಡದ ಹಿನ್ನೆಲೆಯಲ್ಲಿ ಕೈದಿಯೊಬ್ಬ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೂ ಇದಕ್ಕೆ ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎರಡು ದಿನಗಳ ಹಿಂದೆಯೂ ಮರವನ್ನೇರಿ ಇದೇ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗಿತ್ತು.
ಆದರೆ, ಇದನ್ನು ತಳ್ಳಿಹಾಕಿರುವ ಜೈಲು ಅಧಿಕಾರಿಗಳು, ಸರಿಯಾದ ರೀತಿಯಲ್ಲಿ ಊಟ ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ ಸಮಸ್ಯೆ ಉಂಟಾದ ಕೈದಿಗಳಿಗೂ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.






















