ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನೈಋತ್ಯ ರೈಲ್ವೆ ಓಡಿಸಲಿದೆ.
ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ರೈಲು (ರೈಲು ಸಂಖ್ಯೆ 06551) ಆಗಸ್ಟ್ 20 ಮತ್ತು 22 ರಂದು ರಾತ್ರಿ 7ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ 8.25ಕ್ಕೆ ಬೆಳಗಾವಿ ತಲುಪಲಿದೆ.
ಮರುಪ್ರಯಾಣದ ಮಾರ್ಗದಲ್ಲಿ ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು ಸಂಖ್ಯೆ 06552 ಆಗಸ್ಟ್ 21 ಮತ್ತು 23 ರಂದು ರಾತ್ರಿ 7.30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ 5ಕ್ಕೆ ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಮಾರ್ಗಮಧ್ಯೆ ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ (ಹೋಗುವ ಮತ್ತು ಬರುವ) ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ವಿಶೇಷ ರೈಲಿನಲ್ಲಿ ಒಟ್ಟು 19 ಬೋಗಿಗಳು ಇದ್ದು, ಇದರಲ್ಲಿ 10 ಸ್ಲೀಪರ್ ಕ್ಲಾಸ್, 7 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ದ್ವಿತೀಯ ದರ್ಜೆ ಕಮ್ ಲಗೇಜ್, ದಿವ್ಯಾಂಗ ಬೋಗಿಗಳನ್ನು ಒಳಗೊಂಡಿವೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.





















