ಹುಬ್ಬಳ್ಳಿ: ದೀಪಾವಳಿ ಸಂಭ್ರಮದ ನಡುವೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನಾಮಿಕರಿಂದ ಬಾಂಬ್ ಬೆದರಿಕೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಪಾಲಿಕೆ ಆಯುಕ್ತರ ಅಧಿಕೃತ ಇ-ಮೇಲ್ಗೆ ಬೆದರಿಕೆ ಸಂದೇಶ ರವಾನೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ತೀವ್ರ ಶೋಧ ನಡೆಸಿವೆ.
ಸೋಮವಾರ ಬೆಳಗ್ಗೆ 11.35ಕ್ಕೆ ʻವೆಯಿಟ್ ಸ್ಮಿತ್ʼ ಎಂಬ ಹೆಸರಿನಲ್ಲಿ ಪಂಜಾಬಿ ಭಾಷೆಯಲ್ಲಿ ಇ-ಮೇಲ್ ಕಳುಹಿಸಲಾಗಿದೆ. ಸಂದೇಶದಲ್ಲಿ ಖಲಿಸ್ತಾನ್ ಪರ ಘೋಷಣೆಗಳ ಜತೆಗೆ ಹಲವು ಗಂಭೀರ ಬೆದರಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ನವೆಂಬರ್ 29ರಂದು ಬೆಂಗಳೂರಿನ ಎನ್ಐಸಿಇ ಸೆಂಟರ್ ಸ್ಟೇಜ್ನಲ್ಲಿ ನಡೆಯಲಿರುವ ಗಾಯಕ ದಲ್ಜಿತ್ ದೋಸಾಂಜ್ ಅವರ ಕಾರ್ಯಕ್ರಮದ ಸ್ಥಳದಲ್ಲಿ ಸ್ಫೋಟ ನಡೆಸುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ. ನವೆಂಬರ್ 27ರಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮನೆ ಸಮೀಪ ಸ್ಫೋಟ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ ಎನ್ನಲಾಗಿದೆ.
ಇದಲ್ಲದೆ, ಮೆಟ್ರೋ ನಿಲ್ದಾಣದಲ್ಲಿ ಸ್ಫೋಟಕ ಇರಿಸಿರುವುದಾಗಿ ಹಾಗೂ ನವೆಂಬರ್ 29ರಂದು ಮೆಟ್ರೋದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಪಾಲಿಕೆಯಲ್ಲಿ ಪೊಲೀಸರಿಂದ ತೀವ್ರ ಶೋಧ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಡಿಸಿಪಿ ಶೃತಿ ಎನ್.ಎಸ್. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೂ ಪಾಲಿಕೆಯ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪಾಲಿಕೆಯ ಎಲ್ಲ ಕಚೇರಿಗಳಲ್ಲೂ ತೀವ್ರ ಶೋಧ ಕಾರ್ಯ ಕೈಗೊಂಡು ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹೆಚ್ಚಿನ ತನಿಖೆ, ಪೊಲೀಸ್ ಆಯುಕ್ತ: ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಮಹಾನಗರ ಪಾಲಿಕೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಇ-ಮೇಲ್ನಲ್ಲಿ ಬೆಂಗಳೂರು ಮತ್ತು ಮುಂಬೈ ಕುರಿತು ಉಲ್ಲೇಖಗಳಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ: ಬಾಂಬ್ ಇಟ್ಟಿರುವುದಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಬಿಜವಾಡ ತಿಳಿಸಿದ್ದಾರೆ.






















