SK Home Ad
Home ನಮ್ಮ ಜಿಲ್ಲೆ ಧಾರವಾಡ ರೈಲ್ವೆ ಹುದ್ದೆ ಬಡ್ತಿ ಪರೀಕ್ಷೆ: ಕನ್ನಡದಲ್ಲಿ ಬರೆಯಲು ಮತ್ತೆ ನಿರಾಕರಣೆ

ರೈಲ್ವೆ ಹುದ್ದೆ ಬಡ್ತಿ ಪರೀಕ್ಷೆ: ಕನ್ನಡದಲ್ಲಿ ಬರೆಯಲು ಮತ್ತೆ ನಿರಾಕರಣೆ

0
4

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಹುದ್ದೆ ಬಡ್ತಿ ಪರೀಕ್ಷೆ ಜೂನ್ 25 ರಂದು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ಮಹಾನಗರದಲ್ಲಿ ನಡೆಯಲಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ. ಇದರಿಂದಾಗಿ ಕನ್ನಡದಲ್ಲಿ ಬರೆಯಲು ಮತ್ತೆ ಅವಕಾಶ ಇಲ್ಲದಂತಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ನೀಡಿದ್ದ ಭರವಸೆ ಹುಸಿಯಾಗಿದೆ.

ನೈರುತ್ಯ ರೈಲ್ವೆಯ ಈ ಧೋರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಕಿಡಿಕಾರಿವೆ. ಈ ಮೊದಲೂ ಸಹ ಈ ರೀತಿ ಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಟ್ಟಿರಲಿಲ್ಲ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಬಯಸಿದ ಬಡ್ತಿ ಆಕಾಂಕ್ಷಿಗಳು ಇದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತೃಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದರು.

ಇವರ ಬೇಡಿಕೆಯನ್ನು ಕನ್ನಡಪರ ಸಂಘಟನೆಗಳು ಬೆಂಬಲಿಸಿದ್ದವು. ಪರೀಕ್ಷೆ ನಡೆಯುವ ದಿನ ಬೆಂಗಳೂರು, ಹುಬ್ಬಳ್ಳಿಯಲ್ಲಿ ಪರೀಕ್ಷೆ ಕೇಂದ್ರದ ಮುಂದೆಯೇ ಧರಣಿ ನಡೆಸಿದ್ದರು. ಪರೀಕ್ಷೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ಹುಬ್ಬಳ್ಳಿಯಲ್ಲಿ ಪರೀಕ್ಷೆ ಮೊಟಕುಗೊಳಿಸಲಾಗಿತ್ತು. ಕನ್ನಡ ಅಭ್ಯರ್ಥಿಗಳ ಬೇಡಿಕೆ ಪರಿಶೀಲಿಸಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ರೈಲ್ವೆ ಮಂಡಳಿಗೆ ಮನವಿ ಮಾಡಲಾಗುತ್ತದೆ ಎಂದು ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದರು.

ನೈಋತ್ಯ ರೈಲ್ವೆ ವಲಯ ಆಡಳಿತವೂ ಇದನ್ನೇ ಹೇಳಿತ್ತು. ಆದರೆ, ಈಗ ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡದೇ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬಡ್ತಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಧೋರಣೆಗೆ ಹುದ್ದೆ ಬಡ್ತಿ ಆಕಾಂಕ್ಷಿಗಳು ಕಂಗೆಟ್ಟಿದ್ದರೆ, ಕರವೇ ಸೇರಿ ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡಿವೆ.

ಬಡ್ತಿ ಹುದ್ದೆ ಆಕಾಂಕ್ಷಿಗಳು ಹೇಳುವುದೇನು?: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕಾಗಿಯೇ ಪಟ್ಟು ಹಿಡಿದು ಹೋರಾಟ ಮಾಡಿದೆವು. ಎರಡು ಬಾರಿ ಪರೀಕ್ಷೆ ಈ ಕಾರಣಕ್ಕೆ ರದ್ದುಪಡಿಸಿತು. ಮೂರನೇ ಬಾರಿಯಾದರೂ ಅವಕಾಶ ಕೊಡುವ ಭರವಸೆ ಇತ್ತು. ಆದರೆ, ಈ ಬಗ್ಗೆ ಏನೂ ಹೇಳದೇ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬಡ್ತಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ನಾವು ಇನ್ನೂ ಎಷ್ಟು ಹೋರಾಟ ನಡೆಸಬೇಕು? 3ನೇ ಬಾರಿಯೂ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಏನು ಮಾಡಬೇಕು? ಈಗ ನಾವು ಪರೀಕ್ಷೆ ಬರೆಯದಿದ್ದರೆ ಲಭಿಸಬಹುದಾದ ಹುದ್ದೆಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಏನು ಮಾಡಬೇಕೊ ತೋಚುತ್ತಿಲ್ಲ. ಗೊಂದಲದಲ್ಲಿದ್ದೇವೆ ಎಂದು ಹುದ್ದೆ ಬಡ್ತಿ ಆಕಾಂಕ್ಷಿಯೊಬ್ದರು ಅಳಲು ತೋಡಿಕೊಂಡರು.

ಮತ್ತೊಂದೆಡೆ ಜೂನ್ 25ರಂದು ಪರೀಕ್ಷೆ ನಡೆಯಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಘೋಷಣೆ ಮಾಡಿವೆ.