SK Home Ad
Home ಅಂಕಣ ಅಂಕಣ ಬರಹ: ಲಂಚ ನಿರ್ಮೂಲನೆ …ಬಾಯಲ್ಲಿ’ನ ಮಾತಾಗದಿರಲಿ!

ಅಂಕಣ ಬರಹ: ಲಂಚ ನಿರ್ಮೂಲನೆ …ಬಾಯಲ್ಲಿ’ನ ಮಾತಾಗದಿರಲಿ!

0
1

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಭ್ರಷ್ಟಾಚಾರ ಮುಕ್ತ ಕರ್ನಾಟಕ. ಇದು ನನ್ನ ಆಶಯ ಮತ್ತು ಉದ್ದೇಶ… ಇದಕ್ಕಾಗಿ ನನ್ನ ಕಾರ್ಯತಂತ್ರ..’
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ನಂತರ ನಡೆದ ರಾಜ್ಯದ ಉನ್ನತಾಧಿಕಾರಿಗಳ ಸಭೆ ಆದ ಮೇಲೆ ಘೋಷಿಸಿದ್ದು ಹೀಗೆ!

ಹತ್ತು ರೂಪಾಯಿಯೂ ಲಂಚ ಪಡೆಯುವಂತಿಲ್ಲ… ಎಲ್ಲ ಸರ್ಕಾರಿ ಕೆಲಸಗಳೂ ಕಾಲಮಿತಿಯಲ್ಲೇ ಆಗಬೇಕು. ಲಂಚ ನಿಗ್ರಹಕ್ಕಾಗಿ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂಬುದು ಅವರ ಮಾತಿನ ಸಾರವಾಗಿತ್ತು.

ಮುಖ್ಯಮಂತ್ರಿ ಹೇಳಿದ ಕ್ಷಣದಲ್ಲೇ ಪ್ರತಿಪಕ್ಷದಿಂದ ಬಂದ ಪ್ರತಿಕ್ರಿಯೆ, `ಭೂತದ ಬಾಯಲ್ಲಿ…’ ಎಂದು. ಡಿ.ಕೆ. ಶಿವಕುಮಾರ್ ಅವರು ಲಂಚ ಮುಕ್ತ ಕರ್ನಾಟಕದ ಗ್ಯಾರಂಟಿಯೇನೂ ಕೊಟ್ಟಿಲ್ಲ. ತಾಕೀತು ಮಾಡಿದ್ದಾರಷ್ಟೇ. ಗ್ಯಾರಂಟಿ ಕೊಡುವುದು ಸಾಧ್ಯವೂ ಇಲ್ಲ ಎನ್ನುವುದು ಅವರಿಗೂ ಗೊತ್ತು. ರಾಜ್ಯದ ಜನತೆಗೂ ಗೊತ್ತು.

ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಸುವ ಡಿಕೆಶಿ ಆಶಯವೇ ಆಡಳಿತಶಾಹಿಗೆ- ಕಾರ್ಯಾಂಗಕ್ಕೆ ಅಚ್ಚರಿ, ಅದ್ಭುತ ಮತ್ತು ಆಘಾತದ ಸಂಗತಿ! ಜನಸಾಮಾನ್ಯರು ತಾತ್ಸಾರದ ನಗೆಬೀರಿ, `ಲಂಚ ದರಪಟ್ಟಿ’ ಇನ್ನಷ್ಟು ಹೆಚ್ಚಳವಾದೀತು ಎನ್ನುವ ಆತಂಕಕಾರಿ ಮಾತುಗಳನ್ನಾಡಿದರು.

ಭ್ರಷ್ಟಾಚಾರ ಮುಕ್ತ ರಾಜ್ಯ ಘೋಷಣೆಯ ಮರ‍್ನಾಲ್ಕು ದಿನಗಳಲ್ಲೇ ಕರ್ನಾಟಕದ ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಸೇರಿ ಮೂವರು ಪೊಲೀಸ್ ಸಿಬ್ಬಂದಿ, ರಾಜಸ್ಥಾನಕ್ಕೆ ವರದಕ್ಷಿಣೆ ಕೇಸ್ ಒಂದಕ್ಕೆ ತೆರಳಿ, ಆರೋಪಿಯಿಂದ ಲಂಚ ಪಡೆಯುವಾಗ ಸಿಕ್ಕಿ ಬಿದ್ದು ರಾಜ್ಯದ ಮಾನ ಮರ್ಯಾದೆ ಕಳೆದಿದ್ದಾರೆ. ಈಗೇನೋ ಸ್ವತಃ ಗೃಹ ಮಂತ್ರಿಗಳೇ ಖೇದ ವ್ಯಕ್ತಪಡಿಸಿ, ಅವರನ್ನು ಅಮಾನತು ಮಾಡಿದ್ದಾರೆ.

ಹಾಗೇ ಕಳೆದ ಒಂದು ವಾರದಲ್ಲಿ ಲೋಕಾಯುಕ್ತರ ಬಲೆಗೆ ರೆಡ್‌ಹ್ಯಾಂಡ್ ಆಗಿ ಹದಿನಾರಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿ ಸಿಕ್ಕು ಬಿದ್ದಿದ್ದಾರೆ. ಅಲ್ಲದೇ, ಹತ್ತು ಅಧಿಕಾರಿಗಳ ಮನೆಗಳ ಮೇಲೆ ರೇಡ್ ಮಾಡಿ ಅಕ್ರಮ ಆಸ್ತಿಪಾಸ್ತಿ, ಹಣ ಜಪ್ತು ಮಾಡಿದ್ದಾರೆ ಲೋಕಾಯುಕ್ತ ಪೊಲೀಸರು. ಕೆಲ ಸಿಬ್ಬಂದಿ ಮನೆಯಲ್ಲಿ ಹತ್ತು ಲಕ್ಷದಿಂದ ನಲವತ್ತು ಲಕ್ಷದವರೆಗೂ ನಗದು ದೊರಕಿದೆ.

ಕರ್ನಾಟಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಅಂದರೆ ಆಡಳಿತ ಯಂತ್ರದಲ್ಲಿ ಭ್ರಷ್ಟ ವ್ಯವಸ್ಥೆ ಅತ್ಯಂತ ಹಾಸುಹೊಕ್ಕಾಗಿ ಮನೆ ಮಾಡಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಇಡೀ ರಾಜ್ಯದ ಜನಕ್ಕೆ ಕಣ್ಣಿಗೆ ರಾಚುವಂತಿದೆ. ಭ್ರಷ್ಟಾಚಾರದ ಆರೋಪದಲ್ಲಿ ಐಎಎಸ್ ಅಧಿಕಾರಿಗಳಿಂದ ಹಿಡಿದು ಶಾಸಕರು, ಮಂತ್ರಿಗಳಿಂದ, ಸಾಮಾನ್ಯ ಗ್ರಾಮ ಪಂಚಾಯ್ತಿಯ ಸಹಾಯಕರವರೆಗೆ ಆರೋಪ-ದೂರುಗಳು ಕೇಳಿ ಬರುತ್ತಿವೆ.

ಕೆಲವರು ಈ ಸಂಬಂಧ ಶಿಕ್ಷೆ ಅನುಭವಿಸಿದ್ದರೆ, ಶೇ. 99ರಷ್ಟು ಮಂದಿ ನಿರ್ಭಿಡೆಯಿಂದ, ನಿರ್ಭಯವಾಗಿ ಲಂಚ ರುಷುವತ್ತಿಗೆ ಯಾವ ಮುಲಾಜು ಇಲ್ಲದೇ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಲಂಚ ಪಡೆಯುವುದು ಮತ್ತು ನೀಡುವುದು ಎರಡೂ ಅಧಿಕೃತ ಎನ್ನುವ ಭಾವನೆ ಜನರಿಗೆ ಈಗ ಮೂಡಿಬಿಟ್ಟಿದೆ. ಇದೀಗ ಯಾವ ಹಂತ ತಲುಪಿದೆ ಎಂದರೆ ಲಂಚ ಕೊಟ್ಟರೂ ಪಡೆದವರ ಕೆಲಸ ಮಾಡಿಕೊಡುತ್ತಿಲ್ಲ; ಮತ್ತಷ್ಟು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎನ್ನುವ ಖೇದ ಜನರಲ್ಲಿ ಕಾಣುತ್ತಿದೆ. ಹಾಗೇ ಅಧಿಕಾರಿಗಳು, ಸಿಬ್ಬಂದಿ ಮತ್ತು ವ್ಯವಸ್ಥೆ ಕೂಡ ಲಂಚ ರುಷುವತ್ತಿಗೆ ಬಾಯ್ದೆರೆದು ಕೂತಿದೆ.

ಭ್ರಷ್ಟಾಚಾರದ ಮೂಲ ವಿಧಾನಸೌಧದ ಮೂರನೇ ಮಹಡಿ. ಇದು ಎಲ್ಲರಿಗೂ ತಿಳಿದಿರುವ ಘೋಷಿತ ಮಾತು. ಅಲ್ಲಿಯ ವ್ಯವಸ್ಥೆ ಸರಿ ಇದ್ದರೆ ನಿಯಂತ್ರಣ ಗ್ರಾಮ ಮಟ್ಟದವರೆಗೂ ಖಂಡಿತ ಸಾಧ್ಯ. ದುರಂತವೆಂದರೆ ಮೂರನೇ ಮಹಡಿಗೆ ಈ ಕಳಂಕ ಕರ್ನಾಟಕ ಏಕೀಕರಣ ಕಾಲದಿಂದಲೇ ಅಂಟಿಕೊಂಡಿದೆ. ಮೂರನೇ ಮಹಡಿಯಲ್ಲಿನ ಭ್ರಷ್ಟಾಚಾರದಿಂದ ಅಧಿಕಾರ ಕಳೆದುಕೊಂಡು ಛೀ ಥೂ ಎಂದು ಉಗಿಸಿಕೊಂಡವರಿದ್ದಾರೆ. ಅತ್ಯುನ್ನತ ಹುದ್ದೆಗಳಲ್ಲಿದ್ದ ಅಧಿಕಾರಿಗಳು ಕಂಬಿ ಎಣಿಸಿದ್ದಾರೆ- ಎಣಿಸುತ್ತಿದ್ದಾರೆ ಎಲ್ಲವೂ ನಿಜ. ಆದರೆ ಯಾರಿಗೂ ಅಂಜಿಕೆ ಇಲ್ಲ.

ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿಯ ಭ್ರಷ್ಟ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಬಿಡುತ್ತದೆ. ಲೋಕೋಪಯೋಗಿ, ಕಂದಾಯ, ನಗರಾಭಿವೃದ್ಧಿ ಇತ್ಯಾದಿ ಕೆಲವೇ ಇಲಾಖೆಗಳಲ್ಲಿದ್ದ ಕೆಂಪು ಪಟ್ಟಿ' ಈಗಂತೂ ಚಿಕ್ಕಪುಟ್ಟ ಕಚೇರಿಗಳಲ್ಲೂ ನುಗ್ಗಿಬಿಟ್ಟಿದೆ. ಬಾಬು ಸಂಸ್ಕೃತಿ ತಾಂಡವವಾಡುತ್ತಿದೆ. ನಿಗಮ ಮಂಡಳಿಗಳಲ್ಲಿ ಹಾಯಾಗಿ ಹೊದ್ದು ಮಲಗಿದೆ. ಇದಕ್ಕೇ ಅಲ್ಲವೇ, ಸಹಕಾರಿ ಬ್ಯಾಂಕ್‌ಗಳಲ್ಲಿ, ಬೋವಿ ನಿಗಮ, ಎಸ್ಸಿಎಸ್ಟಿ ನಿಗಮ, ಕಾರ್ಮಿಕ ಇಲಾಖೆ ಹೀಗೆ ಎಲ್ಲೆಡೆ ಟೂಲ್ ಕಿಟ್ ಹಗರಣ ನಡೆದು ಅಧಿಕಾರ ಗಿಟ್ಟಿಸಿದವರಿದ್ದಾರೆ. ವಿಧಾನಸೌಧದ ಒಳಗೆ ಕೂತು ಭುಸುಗುಡುತ್ತಿರುವನಾಗ’ರುಗಳಿಗೆ ಪರ್ಸೆಂಟೇಜ್ ಫಿಕ್ಸ್ ಮಾಡುವವರು ಈಗ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.

ಮುಖ್ಯಮಂತ್ರಿ ಆಶಯವನ್ನು ಸದುದ್ದೇಶದಿಂದಲೇ ನೋಡಬೇಕಾ? ನೋಡೋಣ. ಮೊದಲು ಗ್ರಾಮಾಂತರ ಮಟ್ಟದಲ್ಲಿ ಜನರಿಗೆ ಸರಿಯಾಗಿ ಅವರ ಭೂದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಲೆದಾಡಿಸದೇ ವೈದ್ಯಕೀಯ ಚಿಕಿತ್ಸೆ, ಬೆಳೆವಿಮೆ ಒದಗಿಸಿ. ಜನನ-ಮರಣ ದಾಖಲೆಗೂ, ನೋಂದಣಿಗೂ ಲಂಚ ಸ್ವೀಕರಿಸಿ ಕೊಡುವ ಸ್ಥಿತಿ ಇದೆ. ಪ್ರತಿ ತಾಲ್ಲೂಕು- ಹೋಬಳಿಗಳಿಂದ ಏಜೆಂಟರು ಇದಕ್ಕಾಗಿ ಹುಟ್ಟಿಕೊಂಡಿದ್ದಾರೆ. ದಲ್ಲಾಳಿಗಳು, ಏಜೆಂಟರಿಲ್ಲದ ಕಾರ್ಯ ಈಗ ಯಾವುದಿದೆ ಹೇಳಿ? ಭ್ರಷ್ಟಾಚಾರ ನಿಗ್ರಹಕ್ಕಿರುವ ಸಂಸ್ಥೆಗಳು, ಕಾನೂನುಗಳು ಮತ್ತು ವ್ಯವಸ್ಥೆಯ (ಲೋಕಾಯುಕ್ತ, ಪೊಲೀಸ್, ಪಾರದರ್ಶಕ ಕಾಯ್ದೆ, ಆರ್‌ಟಿಐ, ಸಕಾಲ ಇತ್ಯಾದಿ) ಕಾರ್ಯಾಚರಣೆ ಚುರುಕಾಗಬೇಕಲ್ಲವೇ..

ಕಂದಾಯ ಮಂತ್ರಿಯಾಗಿದ್ದ ಕೃಷ್ಣ ಭೈರೇಗೌಡ, ಒಂದಿಷ್ಟು ಆಡಳಿತ ಸುಧಾರಣೆಗಳಿಗೇನೋ ಕೈ ಹಾಕಿದರು. ಆದರೆ ಅವರ ಇ-ಸ್ವತ್ತು, ಇ-ಖಾತೆ, ಪೋಡಿ, ಸರ್ವೇ, ಭೂದಾಖಲೆ, ನೋಂದಣಿ ಕ್ರಮವೆಲ್ಲ ಜನತೆಗೆ ಮತ್ತಷ್ಟು ಹಣ ತೆತ್ತು ಹಿಂಸೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ, ಧಾರವಾಡ, ವಿಜಯಪುರ, ಬಳ್ಳಾರಿಗಳಲ್ಲಿ ಹತ್ತು- ಹದಿನೈದು ವರ್ಷಗಳ ಹಿಂದೆ ಸತ್ತವರು `ಮತ್ತೆ ಹುಟ್ಟಿ ಬಂದು’ ತಮ್ಮ ಭೂಮಿ ಮಾರಿದ್ದಾರೆ. ಭೂ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ!. ಹೇಗೆ ಆಯಿತು ಇ-ನೋಂದಣಿ?

ಕಂದಾಯ ಮಂತ್ರಿಗಳೇನೋ ಉತ್ತಮ ಯೋಜನೆ ಮತ್ತು ಯೋಚನೆ ಮಾಡಿದ್ದಾರೆ; ಆದರೆ ರಂಗೋಲಿ ಕೆಳಗೆ ನುಸುಳುವ ಅಧಿಕಾರಿಗಳು ದಾರಿ ಹುಡುಕಿದ್ದಾರೆ! ಅಧಿಕಾರಿಗಳ ವರ್ಗಾವಣೆಯಿಂದ ಲಂಚ ರುಷುವತ್ತು ಆರಂಭವಾಗುತ್ತದೆ. ತಾನು ಇಷ್ಟು ಕೊಟ್ಟು ಬಂದಿರುವೆ, ನಾನು ಕಕ್ಕಿಸಬೇಡವೇ ಎಂದು ಹೇಳುವ ಮಟ್ಟಕ್ಕೆ ಧಾಷ್ಟ್ರ್ಯ ತೋರುತ್ತಿದ್ದಾನೆ. ಅಧಿಕಾರಿಯೊಬ್ಬರು ಒಂದು ಉದಾಹರಣೆ ಹೇಳಿದರು: ಸೇತುವೆ, ಶಾಲೆ, ರಸ್ತೆ, ಕಟ್ಟಡಗಳು ಶಂಕುಸ್ಥಾಪನೆಯಾಗಬೇಕಾಗಿದೆ. ಪ್ರೊಟೊಕಾಲ್ ಪ್ರಕಾರ ಜನಪ್ರತಿನಿಧಿಗಳನ್ನು ಕರೆಯಬೇಕಿತ್ತು. ಆದರೆ `ಹಣ ಕೊಡದೇ’ ಶಾಸಕರು ಬರುವುದಿಲ್ಲ. ಮತ್ತೆ ಉದ್ಘಾಟನೆಗೂ ಅದೇ ಮಾಮೂಲಿ. ಗುತ್ತಿಗೆದಾರ ಮೊದಲು ಅಧಿಕಾರಿಗಳಿಗೆ, ತನ್ಮೂಲಕ ಶಾಸಕರಿಗೆ ಲಂಚ ನೀಡುತ್ತಿದ್ದ. ಈಗ ಶಾಸಕರೇ ಮೊದಲು ಫಿಕ್ಸ್ ಮಾಡಿಕೊಂಡು, ನಂತರ ಅಧಿಕಾರಿಗಳ ಕಡೆಗೆ ಗಮನ ಕೊಡುವ ಸ್ಥಿತಿ ಬಂದಿದೆ! ಸರ್ಕಾರಿ ನಿರ್ಧಾರಗಳೇ ಭ್ರಷ್ಟಾಚಾರಕ್ಕೆ ಮೂಲ.

ಈಗ ಗ್ಯಾರಂಟಿ ವಿವಾದ ಮತ್ತೆ ಎದ್ದಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಪುನರ್ವಿಮರ್ಶೆಗೆ ಸರ್ಕಾರ ಸಜ್ಜಾಗಿದೆ. ನಿಜ. ಮೃತಪಟ್ಟವರು, ಅನರ್ಹರ ಹೆಸರು ಡಿಲೀಟ್ ಆಗಲೇಬೇಕಿದೆ. ಆದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕಿದ್ದರೆ ಲಂಚ ರುಷುವತ್ತಿಲ್ಲದೇ `ಗ್ಯಾರಂಟಿ’ ಉಳಿಯುತ್ತದೆ ಎನ್ನುವ ಗ್ಯಾರಂಟಿ ಯಾರಿಗೂ ಇಲ್ಲ ! ಎಲ್ಲಕ್ಕೂ ಹೆಚ್ಚಾಗಿ ಗ್ರಾಮೀಣ ಪ್ರದೇಶದ ವೃದ್ಧರು, ಅಬಲೆಯರು ಮತ್ತು ಗುಡ್ಡಗಾಡು ಜನಾಂಗದವರು ಸರ್ಕಾರದಿಂದ ಮೂಲಭೂತ ಸವಲತ್ತುಗಳಿಂದ ವಂಚಿತರಾದ ಜನ. ಇವರಿಗೆ ಹಿಂಸೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು.

ಈ ಮಧ್ಯೆ ಶಕ್ತಿ ಯೋಜನೆಗೆ ಹೊಸ `ಸ್ಮಾರ್ಟ್ ಕಾರ್ಡ್’ ಮಾಡುವುದಾಗಿ ನೂತನ ಸಾರಿಗೆ ಸಚಿವರು ಘೋಷಿಸಿದ್ದಾರೆ. ಸ್ಮಾರ್ಟ್ ಕಾರ್ಡ್ ಏಕಾಗಿ? ಆಧಾರ್ ಕಾರ್ಡ್ ಮೇಲೆ ಮೂರು ವರ್ಷಗಳ ಕಾಲ ಮಹಿಳೆಯರು ಬಸ್‌ಗಳಲ್ಲಿ ಓಡಾಡಿದ್ದಾರೆ. ಆಧಾರ್‌ನಲ್ಲಿ ಫೋಟೊ ಇರುತ್ತದೆ. ಈಗ ಮತ್ತೆ ಸ್ಮಾರ್ಟ್ ಕಾರ್ಡ್ ಹೆಸರಲ್ಲಿ ಮತ್ತಷ್ಟು ಶೋಷಣೆ. ಹಾಗೆಯೇ ಜನ, ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧೆಯರು ಸರತಿ ಸಾಲಿನಲ್ಲಿ ನಿಂತು ಮತ್ತೊಂದು ದಾಂಧಲೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಸ್ಮಾರ್ಟ್ ಕಾರ್ಡ್ ಸ್ಮಾರ್ಟ್ ಭ್ರಷ್ಟಾಚಾರ ಎನ್ನುವ ಆರೋಪ ಭವಿಷ್ಯತ್ತಿನಲ್ಲಿ ಕೇಳಿ ಬರಬಹುದೇನೋ !?

ಹೊಸ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್, ರಾತ್ರಿ ಹಗಲು ಆಸ್ಪತ್ರೆಗಳ ಮತ್ತು ವ್ಯವಸ್ಥೆಯ ಪರ್ಯಟನೆಯನ್ನು ಆರಂಭಿಸಿದ್ದಾರೆ. ವೈದ್ಯರ ನೇಮಕ, ಸಿಬ್ಬಂದಿ ಸ್ಥಿತಿಗತಿ ಕುರಿತು ಖಾದರ್ ಮಧ್ಯರಾತ್ರಿಯೂ ಮೀಟಿಂಗ್‌ಗಳನ್ನು ನಡೆಸುತ್ತಿದ್ದಾರೆ. ಜನ ಬಯಸುವುದು ಇದನ್ನೇ. ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಖಾದರ್ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಶ್ಲಾಘನೆ ಪಡೆದುಕೊಂಡಿತ್ತು.

ಈಗ ಜನಕ್ಕೆ ಬೇಕಾಗಿರುವುದು ಪಂಚ ಗ್ಯಾರಂಟಿಗಳ ಜೊತೆ ಜೊತೆಗೆ `ಬದುಕಿನ ಗ್ಯಾರಂಟಿ’. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳೇ ಇಲ್ಲ. ಹಾವು ಮತ್ತು ಚೇಳಿನಂತಹ ವಿಷಜಂತುಗಳಿಂದ ವರ್ಷಕ್ಕೆ ಆರು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ವನ್ಯಜೀವಿಗಳ ದಾಂಧಲೆ ಹೆಚ್ಚಾಗಿದೆ. ನಾಯಿ ಕಡಿತದಿಂದ ಹನ್ನೆರಡು ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದಾರೆ. ಮಂಗನ ಕಾಯಿಲೆ ಲಸಿಕೆಯ ಸಂಶೋಧನೆ ಮುಗಿಯದೇ ಔಷಧಿಯೇ ಇಲ್ಲವಾಗಿದೆ.

ಈ ಸ್ಥಿತಿಯಲ್ಲಿ ಖಾದರ್ ಅವರಿಂದ ಜನ ಬಯಸುವುದು ಬದುಕಿನ ಗ್ಯಾರಂಟಿ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ, ಸೂಕ್ತ ಚಿಕಿತ್ಸೆ, ಜೊತೆಗೆ ಆಯುಷ್ಮಾನ್- ಬಿಪಿಎಲ್ ಕಾರ್ಡ್‌ಗಳು ಎಲ್ಲೆಡೆ ಸುಲಭವಾಗಿ ಮಾನ್ಯಗೊಂಡು ಕಟ್ಟಕಡೆಯ ವ್ಯಕ್ತಿಗೂ ಸೂಕ್ತ ಚಿಕಿತ್ಸೆ ದೊರೆಯುವಂತಹ ಕ್ರಮ ಕೈಗೊಂಡರೆ ಖಾದರ್ ಖದರನ್ನು ಖಂಡಿತ ಮೆಚ್ಚಬಹುದು.

`ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಮುಖ್ಯಮಂತ್ರಿಗಳ ಆಶಯ ಒಳ್ಳೆಯದ್ದೇ, ಅಸಾಧ್ಯ ಎನ್ನುವುದೂ ಗೊತ್ತು. ಆದರೆ, ಈಗಿರುವ ಪ್ರಮಾಣವನ್ನು ಶೇ 50ರಷ್ಟು ನಿಗ್ರಹಿಸಿ, ಜನರಿಗೆ ಸರಳ, ಸುರಕ್ಷಿತ, ಹಿಂಸಾರಹಿತ ವ್ಯವಸ್ಥೆ ಜಾರಿಗೆ ತಂದರೂ ಜನ ಶಹಬ್ಬಾಸ್ ಎಂದು ಹರಸಿಯಾರು. ಇಲ್ಲದಿದ್ದರೆ ಭೂತದ ಬಾಯಲ್ಲಿ… ಎನ್ನುವ ಕಳಂಕ ನಿವಾರಣೆಯಾಗದು ಅಲ್ಲವೇ !?