ತಿಪಟೂರು ನಿಲ್ದಾಣದಲ್ಲಿ ಕಾಮಗಾರಿ – ರೈಲುಗಳ ಸಂಚಾರ ನಿಯಂತ್ರಣ : ನೈಋತ್ಯ ರೈಲ್ವೆ
ಹುಬ್ಬಳ್ಳಿ: ತಿಪಟೂರು ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ನಿರ್ಧರಿಸಿದೆ. ಇದರ ಪರಿಣಾಮವಾಗಿ ಜುಲೈ 27ರಿಂದ ಆಗಸ್ಟ್ 20ರವರೆಗೆ ಕೆಲವು ದೈನಂದಿನ ಹಾಗೂ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು ನಿಗದಿತ ವೇಳಾಪಟ್ಟಿಗಿಂತ ವಿಳಂಬವಾಗಿ ಸಂಚರಿಸಲಿವೆ.
ರೈಲು ನಿಲ್ದಾಣದಲ್ಲಿ ಸುರಕ್ಷತೆ ಮತ್ತು ಮೂಲಸೌಕರ್ಯ ಸುಧಾರಣೆಗೆ ಸಂಬಂಧಿಸಿದ ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ದೈನಂದಿನ ರೈಲುಗಳಲ್ಲಿ ಕೆಎಸ್‌ಆರ್ ಬೆಂಗಳೂರು–ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (20688) ರೈಲು 15 ನಿಮಿಷ, ಯಶವಂತಪುರ–ಸಿಂಧನೂರು ಡೈಲಿ ಎಕ್ಸ್‌ಪ್ರೆಸ್ (16545) 90 ನಿಮಿಷ, ಕೆಎಸ್‌ಆರ್ ಬೆಂಗಳೂರು–ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ (20653) 50 ನಿಮಿಷ ಹಾಗೂ ಯಶವಂತಪುರ–ವಿಜಯಪುರ ಡೈಲಿ ಎಕ್ಸ್‌ಪ್ರೆಸ್ (16547) 45 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿವೆ.
ಇದೇ ವೇಳೆ, ಕೆಲವು ವಿಶೇಷ ಹಾಗೂ ಸಾಪ್ತಾಹಿಕ ರೈಲುಗಳ ಸಂಚಾರದಲ್ಲಿಯೂ ಬದಲಾವಣೆ ಮಾಡಲಾಗಿದೆ. ಎಸ್‌ಎಂವಿಟಿ ಬೆಂಗಳೂರು–ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿಸಾಪ್ತಾಹಿಕ ಎಕ್ಸ್‌ಪ್ರೆಸ್ (16553) ರೈಲು ಜುಲೈ 28 ಹಾಗೂ ಆಗಸ್ಟ್ 1, 4, 8, 11, 15 ಮತ್ತು 18ರಂದು 45 ನಿಮಿಷ ವಿಳಂಬವಾಗಲಿದೆ.
ಸಾಯಿನಗರ ಶಿರಡಿ–ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ (16218) ರೈಲು ಜುಲೈ 29 ಹಾಗೂ ಆಗಸ್ಟ್ 5, 12 ಮತ್ತು 19ರಂದು 110 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ಇದಲ್ಲದೆ, ಚೆನ್ನೈ ಸೆಂಟ್ರಲ್–ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (20679) ರೈಲು ಜುಲೈ 31 ಹಾಗೂ ಆಗಸ್ಟ್ 14ರಂದು 30 ನಿಮಿಷ, ಚೆನ್ನೈ ಸೆಂಟ್ರಲ್–ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ (22698) ರೈಲು ಆಗಸ್ಟ್ 2, 9 ಹಾಗೂ 16ರಂದು 30 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಪಡೆದುಕೊಂಡು ನಿಲ್ದಾಣಕ್ಕೆ ಆಗಮಿಸುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 139 ರೈಲ್ವೆ ಸಹಾಯವಾಣಿ ಅಥವಾ IRCTC ವೆಬ್‌ಸೈಟ್ ಮೂಲಕ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.





















