SK Home Ad
Home ನಮ್ಮ ಜಿಲ್ಲೆ ಧಾರವಾಡ `ಸಂಘಟನೆ’ ಹವ್ಯಕರ ಪ್ರಥಮ ಧ್ಯೇಯವಾಗಲಿ: ಡಾ. ಗಿರಿಧರ ಕಜೆ ಕರೆ

`ಸಂಘಟನೆ’ ಹವ್ಯಕರ ಪ್ರಥಮ ಧ್ಯೇಯವಾಗಲಿ: ಡಾ. ಗಿರಿಧರ ಕಜೆ ಕರೆ

0
16

ಹುಬ್ಬಳ್ಳಿ: ಹವ್ಯಕ ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗಬೇಕು. ಎಲ್ಲ ವೈಮನಸ್ಸುಗಳನ್ನು ಬದಿಗಿಟ್ಟು ಸಂಘಟನೆಯಾಗಬೇಕು. ನಮ್ಮದು ಆ ಮಠ, ಈ ಮಠ ಎನ್ನುವುದನ್ನು ಬಿಡಬೇಕು. ಎಲ್ಲರೂ ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ್ ಕಜೆ ಹೇಳಿದರು.

ರವಿವಾರ ಶ್ರೀ ಅಖಿಲ ಹವ್ಯಕ ಮಹಾಸಭಾ, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಸಹಯೋಗದಲ್ಲಿ ಹುಬ್ಬಳ್ಳಿಯ ಹವ್ಯಕ ಭವನದ ಶಂಕರ ಸಭಾಭವನದಲ್ಲಿ ಏರ್ಪಡಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಬೇಕಿರುವುದು ಸಂಘಟನೆ. ಸರಕಾರ ಹವ್ಯಕ ಭಾಷೆ ಅಕಾಡೆಮಿ ಆರಂಭಿಸಿದೆ. ಇದರಿಂದ ನಮ್ಮ ಭಾಷೆಯ ವಿಶೇಷತೆ ವಿಸ್ತೃತಗೊಳ್ಳಲಿದೆ. ಹವ್ಯಕ ಸಮಾಜದವರಲ್ಲಿ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿಯಲ್ಲಿ ವಿಶೇಷತೆ ಇದೆ. ಇದನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಬಿಂಬ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. 13 ಪ್ರಾಂತ್ಯಗಳಲ್ಲಿ ಪ್ರತಿಬಿಂಬ ಕಾರ್ಯಕ್ರಮ ನಡೆಯಲಿದೆ. 50 ತಾಲೂಕುಗಳನ್ನು ಹವ್ಯಕ ಮಹಿಳಾ ವೇದಿಕೆ ರಚನೆಯಾಗಿದೆ. ಮಹಿಳೆಯರು ಸಮಾಜದ ಕೆಲಸ ಮಾಡಲು ಮುಂದೆ ಬರುತ್ತಿರುವುದು ಸಮಾಜದ ಸಂಸ್ಕಾರಕ್ಕೆ ಉದಾಹರಣೆಯಾಗಿದೆ ಎಂದರು.

ಬ್ರಾಹ್ಮಣ ಸಮಾಜದಲ್ಲಿ ಹವ್ಯಕ ಸಮಾಜದವರು ಹೆಚ್ಚಾಗಿದ್ದೇವೆ. ಹೀಗಾಗಿ ಸಮಾಜದ ಮೇಲೆ ಜವಾಬ್ದಾರಿ ಹೆಚ್ಚಿದೆ ಸಂಸ್ಕಾರ, ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರಲ್ಲದೆ, ಪ್ರತಿ ವರ್ಷ ಗಾಯತ್ರಿ ಮಹೋತ್ಸವ, ಪ್ರತಿಬಿಂಬ, ಸಂಸ್ಕಾರೋತ್ಸವ ಮಾಡಬೇಕಿದೆ ಎಂದರು.

ಸಮಾಜದಲ್ಲಿ ಕಷ್ಟದಲ್ಲಿರುವವರು ಇದ್ದಾರೆ ಅಂತವರನ್ನು ಮೇಲೆತ್ತುವ ಕಾರ್ಯ ಹವ್ಯಕ ಸಮಾಜ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ವಸತಿ ನಿಲಯ, ಭವನ ನಿರ್ಮಾಣದಂತಹ ಕಾರ್ಯಗಳಿಗೆ ಮಹಾಸಭಾ ಚಿಂತನೆ ನಡೆಸಿದೆ ಎಂದರು.

ಹವ್ಯಕ ಸಮುದಾಯವೆಂದರೆ ಪ್ರತಿಭೆಗಳ ಮಹಾಸಾಗರ ಹಾಗೂ ಅದ್ಭುತ ಜ್ಞಾನದ ಗಣಿಯಾಗಿದೆ. ಹವ್ಯಕ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳಕಿಗೆ ತರುವ ಕಾರ್ಯವನ್ನು ಸಂಸ್ಥೆ ಕಳೆದ 31 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಯಲ್ಲಾಪುರದ ಸಮಾಜ ಸೇವಕ ಪ್ರಮೋದ ಹೆಗಡೆ ಅವರು ಮಾತನಾಡಿ, ಹವ್ಯಕ ಸಮಾಜವು ಸುಸಂಸ್ಕೃತದಿಂದ ಕೂಡಿದೆ. ನಮ್ಮ ಸಮಾಜಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, ಎಲ್ಲೇ ಹೋದರೂ ನಮ್ಮನ್ನು ಗುರುತಿಸುವ ಬ್ರ‍್ಯಾಂಡ್ ಹೊಂದಿದ್ದೇವೆ. ಧನಾತ್ಮಕ ಭಾವನೆಗಳನ್ನು ನಾವು ಹೊಂದಿದ್ದೇವೆ. ವಿಶ್ವದಲ್ಲಿಯೇ ನಮ್ಮ ಸಮಾಜವು ಪ್ರತಿಭಾವಂತರಿಂದ ಕೂಡಿದ್ದು, ಮೂರನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ನಮ್ಮ ಋಷಿ-ಮುನಿಗಳು ಹಾಕಿಕೊಟ್ಟ ಪರಂಪರೆ ಕಾರಣ ಎಂದರು.

ನಮ್ಮ ಸಮಾಜದವರು ಅತ್ಯುತ್ತಮ ಸಾಧನೆ ಮಾಡಿದ್ದು, ಅವರನ್ನು ಗುರುತಿಸಿ ಸನ್ಮಾನಿಸಿದ್ದೇವೆ. ಇವರು ಸಮಾಜದ ಕನ್ನಡಿ. ಇವರ ಸಾಧನೆ ನಮ್ಮ ಸಮಾಜದ ಮೇಲೆ ಪರಿಣಾಮ ಬೀರಬೇಕು. ಈ ಸಂಖ್ಯೆ ಇನ್ನೂ ಹೆಚ್ಚಬೇಕು ಎಂಬ ಸದುದ್ದೇಶ ಹೊಂದಿದ್ದೇವೆ. ಜೊತೆಗೆ ನಾವು ಬೆಳೆದು ಬಂದ ಬೇರು ಮರೆಯಬಾರದು. ನಮ್ಮ ಪೂರ್ವಜರು ಹಾಕಿಕೊಟ್ಟ ಪರಂಪರೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕು. ಮಕ್ಕಳನ್ನು ಉದ್ಯಮಿಗಳನ್ನಾಗಿ ಮಾಡಬೇಕು ಎಂದರು.

ಸಾಹಿತಿ ಅರುಣಕುಮಾರ ಹಬ್ಬು, ಪತ್ರಕರ್ತ ಮೋಹನ ಹೆಗಡೆ, ಗೋಸೇವಕ ದತ್ತಾತ್ರೇಯ ಭಟ್ಟ, ಸಮಾಜ ಸೇವಕ ಆರ್.ಕೆ. ಹೆಗಡೆ, ಕಲಾಸೇವಕ ಆರ್.ಜಿ. ಭಟ್ಟ ವರ್ಗಾಸರ, ಶಿಕ್ಷಣ ತಜ್ಞೆ ಮಂಗಳಾ ಭಟ್ಟ ಅವರಿಗೆ ಹವ್ಯಕ ಸಾಧಕ ಪ್ರಶಸ್ತಿ ನೀಡಿ ಸಮಾಜದಿಂದ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಸಂಯುಕ್ತ ಕರ್ನಾಟಕ ಸಿಇಓ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಅವರು ಮಾತನಾಡಿ, ಹವ್ಯಕ ಸಮಾಜ ಸಮಾಜದ ಪ್ರತಿನಿಧಿಯಾಗಿ ಗುರುತಿಸಿ, ಸಾಧಕನನ್ನಾಗಿ ಸನ್ಮಾನಿಸುತ್ತಿರುವುದು ಸಂತೋಷ ನೀಡಿದೆ. ಸಾವಿರಾರು ಸಮ್ಮೇಳನಗಳನ್ನು ನೋಡಿದ್ದೇನೆ. ಹವ್ಯಕರ ಸಮ್ಮೇಳನ ವಿಶೇಷತೆಯಿಂದ ಕೂಡಿದೆ. ಇಲ್ಲಿ ಹವ್ಯಕರ ಅಸ್ತಿತ್ವ, ಪರಂಪರೆ ಬೆಳೆಸುವುದರ ಬಗ್ಗೆ ಚರ್ಚೆಯಾಗುವುದು ವಿಶೇಷವಾಗಿದೆ. ಹವ್ಯಕರು ಒಂದಾಗಿದ್ದಾರೆ. ಮತ್ತಷ್ಟು ಸಂಘಟನೆ ಬಲಗೊಳ್ಳಬೇಕು ಎಂದರು.

ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಉಪಾಧ್ಯಕ್ಷ ಶ್ರೀಕಾಂತ ಹೆಗಡೆ ಸ್ವಾಗತಿಸಿ, ಹವ್ಯಕ ಸಮಾಜದ ಪ್ರತಿಯೊಬ್ಬರು ಮಹಾಸಭಾದ ಸದಸ್ಯರಾಗುವಂತೆ ಕರೆ ನೀಡಿ, ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಮಾಡುವ ಬಗ್ಗೆ ತಿಳಿಸಿದರು.

ಗೌರವ ಕಾರ್ಯದರ್ಶಿ ಸುದರ್ಶನ ಹೇಮಾದ್ರಿ, ಹುಬ್ಬಳ್ಳಿ- ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್, ಹವ್ಯಕ ಮಹಿಳಾ ಮಂಡಳ ಅಧ್ಯಕ್ಷೆ ಅನಿತಾ ಭಟ್ಟ, ಮೂರ್ತಿ ಹೆಗಡೆ, ಡಿ. ಶಂಕರ ಭಟ್ಟ ಇತರರಿದ್ದರು. ಪ್ರಶಾಂತಕುಮಾರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

`ಪ್ರತಿಬಿಂಬ’ ಪ್ರತಿಭಾ ಶೋಧ ಕಾರ್ಯಕ್ರಮ: ಬೆಳಿಗ್ಗೆ ಹು-ಧಾ ಪ್ರಾಂತ್ಯ ಪ್ರತಿಬಿಂಬ ಪ್ರತಿಭಾ ಶೋಧ ಕಾರ್ಯಕ್ರಮ ಉದ್ಘಾಟಿಸಿದ ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ಟ ಅವರು, ಪ್ರತಿಬಿಂಬ ಎಂದರೆ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯವಾಗಿದೆ. ಹವ್ಯಕ ಸಮಾಜದಲ್ಲಿ ಹಲವಾರು ಮಾದರಿ ಪ್ರತಿಭೆಗಳು ಇದ್ದು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತೀ ಅವಶ್ಯವಾಗಿದೆ ಎಂದು ಹೇಳಿದರು.

ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸದಸ್ಯ ಶಿವರಾಮ ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಖಿಲ ಹವ್ಯಕ ಮಹಾಸಭಾದ ಮಹಿಳಾ ವೇದಿಕೆಯ ಹುಬ್ಬಳ್ಳಿ-ಧಾರವಾಡ ಶಾಖೆಗಳನ್ನು ಅಧ್ಯಕ್ಷ ಡಾ.ಗಿರಿಧರ ಕಜೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಚಾಲಕ ಮೂರ್ತಿ ಹೆಗಡೆ, ವೀಣಾ ಹೆಗಡೆ, ವಸಂತ ಭಟ್, ಶ್ರೀಕಾಂತ ಹೆಗಡೆ ಸೇರಿದಂತೆ ಅನೇಕರಿದ್ದರು.

`ಪ್ರತಿಬಿಂಬ’ದಲ್ಲಿ ಪ್ರತಿಭೆ ಅನಾವರಣ, ಹಬ್ಬದ ಸಂಭ್ರಮ: ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಅಕ್ಷರಶಃ ಹವ್ಯಕರ ಹಬ್ಬದಂತೆ ಕಂಡು ಬಂತು ಎಂದರೆ ತಪ್ಪೇನಿಲ್ಲ. ಸ್ಪರ್ಧಾ ಸೌರಭ, ಧಾರ್ಮಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವದ ಪ್ರತಿಬಿಂಬ ಕಾರ್ಯಕ್ರಮ ಹಬ್ಬದ ವಾತಾವರಣಕ್ಕೆ ಎಡೆಮಾಡಿಕೊಟ್ಟಿತ್ತು.

ಬೆಳಗ್ಗೆ ಹೋಮ-ಹವನ ಕಾರ್ಯಕ್ರಮ ನಡೆದು ಧಾರ್ಮಿಕತೆ ಮೂಡಿಸಿದರೆ, ಮಹಿಳೆಯರು ಹವ್ಯಕ ಸಂಪ್ರದಾಯದ ಮದುವೆಯಲ್ಲಿ ಹಾಡುವ ನಾಂದಿ, ಮದುಮಗಳನ್ನು ಮಂಟಪಕ್ಕೆ ಕರೆದುಕೊಂಡು ಬರುವ ಹಾಡು, ಶೋಭಾನೆ, ತೊಟ್ಟಿಲು ಹಾಡು, ಶ್ಲೋಕ ಪಠಣ, ಛದ್ಮವೇಷ, ಆಶುಭಾಷಣ, ದೇಶಭಕ್ತಿಗೀತೆ, ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಏಕಪಾತ್ರಾಭಿನಯ, ಹವ್ಯಕ ಸಂಪ್ರದಾಯ ಗೀತೆ, ರಂಗೋಲಿ, ಹವಿರುಚಿ, ಮಣ್ಣಿ, ಕರಕುಶಲ ವಸ್ತುಪ್ರದರ್ಶನದಲ್ಲಿ ಮಕ್ಕಳಿಂದ ಹಿರಿಯರಾದಿಯಾಗಿ ಸೇರಿ ಸಂಭ್ರಮದಿಂದ ಪಾಲ್ಗೊಂಡಿದ್ದು ಪ್ರತಿಬಿಂಬ ಕಾರ್ಯಕ್ರಮದ ಸಡಗರ ಹಿಮ್ಮಡಿಗೊಳಿಸಿತ್ತು. ಸಂಜೆ ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಅವರ ಗಾಯನ, ಸುಪ್ರಸಿದ್ಧ ಕಲಾವಿದರಿಂದ ಸುಧನ್ವಾರ್ಜುನ ಯಕ್ಷಗಾನ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.