SK Home Ad
Home ನಮ್ಮ ಜಿಲ್ಲೆ ಧಾರವಾಡ ಅಡ್ಡ ಮತದಾನದಲ್ಲಿ `ಧರ್ಮಸ್ಥಳ’ ಅಡ್ಡ ತರಬೇಡಿ

ಅಡ್ಡ ಮತದಾನದಲ್ಲಿ `ಧರ್ಮಸ್ಥಳ’ ಅಡ್ಡ ತರಬೇಡಿ

0
4

ಹುಬ್ಬಳ್ಳಿ: ಅಡ್ಡ ಮತದಾನವನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಯಾವುದೇ ಅನುಮಾನವಿಲ್ಲ. ಧರ್ಮಸ್ಥಳಕ್ಕೆ ಕರೆದು ಆಣೆ, ಪ್ರಮಾಣದ ಬಗ್ಗೆ ವಿಜಯೇಂದ್ರ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಧರ್ಮಸ್ಥಳವನ್ನು ಎಳೆಯುವುದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಣೆ, ಪ್ರಮಾಣದ ಬಗ್ಗೆ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು ಬಹಳ ಮನನೊಂದು ಮಾತನಾಡಿದ್ದಾರೆ. ಈ ಬಗ್ಗೆ ನಾನು ರಾಜ್ಯಾಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಧರ್ಮಸ್ಥಳ ಒಂದು ಪವಿತ್ರ ಕ್ಷೇತ್ರ. ಭಕ್ತರ ಒಂದು ಶ್ರದ್ಧಾ ಕೇಂದ್ರ. ಹೀಗಾಗಿ ನಾವು ವಾಸ್ತವಾಂಶ ಕಂಡು ಹಿಡಿಯಲು ಒಂದು ಕಮಿಟಿ ಮಾಡಿದ್ದೇವೆ. ಆ ಮೂಲಕ ಸತ್ಯಾಂಶ ಕಂಡುಕೊಳ್ಳುತ್ತೇವೆ ಎಂದರು.

ಇಂದಲ್ಲ, ನಾಳೆ ಅಡ್ಡ ಮತದಾನ ಮಾಡಿದವರು ಯಾರು? ಎಂಬುದು ತಿಳಿಯುತ್ತದೆ. ಆಗ ನಾವು ಅವರಿಗೆ ಏನು ಪಾಠ ಕಲಿಸಬೇಕೊ ಅದನ್ನು ಕಲಿಸುತ್ತೇವೆ. ರಾಜ್ಯಾಧ್ಯಕ್ಷರ ಮನಸ್ಸಿನ ನೋವು ನನಗೆ ಅರ್ಥವಾಗುತ್ತದೆ. ಆದ ಕಾರಣ ಈ ವಿಚಾರವನ್ನು ಕೈ ಬಿಡಲು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ಅವರು ಕೂಡ ನೀವು ಹಿರಿಯರು ನಿಮ್ಮ ಸಲಹೆ ಪಾಲಿಸುತ್ತೇನೆ ಎಂದಿದ್ದಾರೆ. ಹೀಗಾಗಿ, ಆ ವಿಷಯದ ಚರ್ಚೆ ಈಗ ಬೇಡ ಎಂದು ಹೇಳಿದರು.