SK Home Ad
Home ನಮ್ಮ ಜಿಲ್ಲೆ ಧಾರವಾಡ ಜಮೀನು ವಿವಾದ: ಜಗಳ ತಾರಕಕ್ಕೇರಿ ಫೈರಿಂಗ್‌, ಯುವಕನಿಗೆ ಗಾಯ

ಜಮೀನು ವಿವಾದ: ಜಗಳ ತಾರಕಕ್ಕೇರಿ ಫೈರಿಂಗ್‌, ಯುವಕನಿಗೆ ಗಾಯ

0
1

ಧಾರವಾಡ: ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ ನಡೆದು ಕೊನೆಗೆ ಗುಂಡಿನ ಸದ್ದು ಕೇಳಿ ಬಂದಿದ್ದು, ಘಟನೆಯಲ್ಲಿ ಯುವಕನೋರ್ವನ ಕಾಲಿಗೆ ಗಾಯವಾದ ಘಟನೆ ಇಲ್ಲಿಯ ತಡಸಿನಕೊಪ್ಪದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ತಡಸಿನಕೊಪ್ಪ ಗ್ರಾಮದ ನಿವಾಸಿ ವಿಠ್ಠಲ ವಾಲೀಕಾರ(24) ಎಂಬಾತನ ಕಾಲಿಗೆ ಗುಂಡು ಬಿದ್ದಿದ್ದು, ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸಿಪಿ ಪ್ರಶಾಂತ ಸಿದ್ಧನಗೌಡರ ಸೇರಿದಂತೆ ಇತರರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಏನಿದು ಪ್ರಕರಣ…?: ಇಲ್ಲಿಯ ಐಐಐಟಿ ಬಳಿ 5 ಎಕರೆ ಖಾಸಗಿ ಜಮೀನು ಇದ್ದು, ಇದರಲ್ಲಿ ವಿಠ್ಠಲ ವಾಲೀಕಾರ ಎಂಬಾತನಿಗೆ ಸೇರಿದ 2 ಎಕರೆ ಜಮೀನು ಇತ್ತು. ಮಂಗಳವಾರ ಹುಬ್ಬಳ್ಳಿ ಮೂಲದ ಸುಂದರ ಪಾಲ್ ಮತ್ತು ಚಂದ್ರು ಪಾಲ್ ಎಂಬುವವರು ತಮ್ಮ ಖಾಸಗಿ ಗನ್‌ಮ್ಯಾನ್‌ಗಳ ಜೊತೆಗೆ ಮತ್ತು ಬೆಂಬಲಿಗರೊಂದಿಗೆ ಆಗಮಿಸಿ ಖಾಸಗಿ ಕಂಪನಿಯೊಂದಿಗೆ ಡೆವಲಪ್ ಮಾಡಲಾಗುತ್ತಿದೆ ಎಂದು ತಕರಾರು ತೆಗೆದಿದ್ದಾರೆ.

ಆಗ ವಿಠ್ಠಲ ಮತ್ತು ಆತನ ಸಹೋದರ ಮಾರುತಿ ಹಿಂಡಸಗೇರಿ ಸೇರಿದಂತೆ ಇತರರು ಇದರಲ್ಲಿ ನಮ್ಮ ಜಮೀನು ಇದೆ. ಅದನ್ನು ಬಿಟ್ಟು ಇನ್ನುಳಿದ ಜಮೀನಿನಲ್ಲಿ ನೀವು ಏನಾದರೂ ಮಾಡಿಕೊಳ್ಳಿರಿ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸುಂದರ್ ಪಾಲ್ ಮತ್ತು ಚಂದ್ರು ಪಾಲ್ ವಿಠ್ಠಲನೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಎರಡೂ ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ.

ಆಗ ಡೆವಲಪರ್‌ಗಳೇ ಸ್ವತಃ ತಮ್ಮ ಬಳಿ ಇದ್ದ ಕಂಟ್ರಿ ಪಿಸ್ತೂಲ್ ತೆಗೆದು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಕೆಳಗಡೆ ಮುಖ ಮಾಡಿ ಗುಂಡು ಹಾರಿಸುವ ಸಂದರ್ಭದಲ್ಲಿ ವಿಠ್ಠಲ ಬಲಗಾಲಿನ ಕಿರುಬೆರಳಿಗೆ ತಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಖಾಸಗಿ ಗನ್‌ಮ್ಯಾನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.