SK Home Ad
Home ಸಿನಿ ಮಿಲ್ಸ್ ಕ್ರೈಂ ಲೋಕದ ಕಥೆಗೆ ಪ್ರೀತಿ-ಭಾವನೆಗಳ ಸ್ಪರ್ಶ ನೀಡಿದ ‘ರಕ್ಕಿ’

ಕ್ರೈಂ ಲೋಕದ ಕಥೆಗೆ ಪ್ರೀತಿ-ಭಾವನೆಗಳ ಸ್ಪರ್ಶ ನೀಡಿದ ‘ರಕ್ಕಿ’

0
36

‘ರಕ್ಕಿ’ ಸಿನಿಮಾ ವಿಮರ್ಶೆ: ರೌಡಿಸಂ ಹಿನ್ನೆಲೆಯಲ್ಲೊಂದು ಭಾವನಾತ್ಮಕ ಕೌಟುಂಬಿಕ ಕಥೆ

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್, ಮತ್ತೊಮ್ಮೆ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ‘ರಕ್ಕಿ’ ಚಿತ್ರವು ಅಂಡರ್‌ವರ್ಲ್ಡ್ ಹಿನ್ನೆಲೆಯ ಕಥೆಯಾಗಿದ್ದರೂ, ಸಾಮಾನ್ಯ ರೌಡಿಸಂ ಸಿನಿಮಾಗಳಿಗಿಂತ ಭಿನ್ನವಾಗಿ ಕುಟುಂಬ, ಪ್ರೀತಿ ಮತ್ತು ಭಾವನೆಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ.

ಕಥೆಯ ಹೂರಣ : ರಕ್ಕಿ (ರಕ್ಕಿ ಸುರೇಶ್) ಅಂಡರ್‌ವರ್ಲ್ಡ್ ಆಪರೇಟರ್ ಡ್ಯಾನಿ (ಬಿ. ಸುರೇಶ್) ಅವರ ಕೈಕೆಳಗೆ ಕೆಲಸ ಮಾಡುವ ರೌಡಿ. ಡ್ಯಾನಿಯ ಮಗಳು ಸಿರಿ (ಪಲ್ಲವಿ) ರಕ್ಕಿಯನ್ನು ಪ್ರೀತಿಸುತ್ತಾಳೆ. ಮೊದಲಿಗೆ ಆ ಪ್ರೀತಿಯನ್ನು ತಿರಸ್ಕರಿಸಿದ ರಕ್ಕಿ ನಂತರ ಒಪ್ಪಿಕೊಳ್ಳುತ್ತಾನೆ. ಆದರೆ ಸಿರಿ, ರಕ್ಕಿ ತನ್ನ ಅಪರಾಧದ ಬದುಕನ್ನು ತೊರೆಯಬೇಕೆಂದು ಬಯಸುತ್ತಾಳೆ. ಇದೇ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವ್ಯಕ್ತಿಯೊಬ್ಬನನ್ನು ಮುಗಿಸಲು ಡ್ಯಾನಿ ದೊಡ್ಡ ಡೀಲ್ ಮಾಡುತ್ತಾನೆ. ಈ ಕಾರ್ಯಕ್ಕಾಗಿ ರಕ್ಕಿ ಮತ್ತು ಗಣೇಶ್ (ಸಂಪತ್) 130 ಕಿಲೋಮೀಟರ್ ಪ್ರಯಾಣ ಕೈಗೊಳ್ಳುತ್ತಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಹೊಸ ಡೇಟ್ ಫಿಕ್ಸ್

ಈ ಪ್ರಯಾಣದಲ್ಲಿ ಅನೇಕ ಅಚ್ಚರಿಯ ಸತ್ಯಗಳು ಹೊರಬೀಳುತ್ತವೆ. ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಚಾಂದಿನಿ (ಆಶಿಕಾ) ಪಾತ್ರದ ಮೂಲಕ ರಕ್ಕಿಯ ಮತ್ತೊಂದು ಪ್ರೇಮಕಥೆ ಅನಾವರಣಗೊಳ್ಳುತ್ತದೆ. ಅಂತಿಮವಾಗಿ ಆ ಡೀಲ್ ಯಶಸ್ವಿಯಾಗುತ್ತದೆಯೇ? ರಕ್ಕಿಯ ಜೀವನ ಯಾವ ತಿರುವು ಪಡೆಯುತ್ತದೆ? ಎಂಬುದೇ ಚಿತ್ರದ ಕುತೂಹಲ.

ಕಲಾವಿದರ ಅಭಿನಯ : ‘ರಕ್ಕಿ’ ಚಿತ್ರದ ದೊಡ್ಡ ಶಕ್ತಿ ನಾಯಕ ನಟ ರಕ್ಕಿ ಸುರೇಶ್. ಮೊದಲ ಸಿನಿಮಾದಲ್ಲಿಯೇ ಅವರು ಮಾಸ್ ಹೀರೋ ಆಗುವ ಸಾಮರ್ಥ್ಯವನ್ನು ತೋರಿಸಿದ್ದಾರೆ. ನಟನೆಯ ಜೊತೆಗೆ ಆಕ್ಷನ್ ಮತ್ತು ಡ್ಯಾನ್ಸ್‌ನಲ್ಲಿಯೂ ಗಮನ ಸೆಳೆಯುತ್ತಾರೆ. ಪಲ್ಲವಿ ಮತ್ತು ಆಶಿಕಾ ಇಬ್ಬರೂ ತಮ್ಮ ಪಾತ್ರಗಳಲ್ಲಿ ಮಿಂಚಿದ್ದು, ಉತ್ತಮ ಅಭಿನಯ ನೀಡಿದ್ದಾರೆ. ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ ಮತ್ತು ಬಾಲ ರಾಜ್‌ವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಅವರ ಅಭಿನಯ ವಿಶೇಷವಾಗಿ ಗಮನ ಸೆಳೆಯುತ್ತದೆ.

ಇದನ್ನೂ ಓದಿ: DCM ಪವನ್‌ಗೆ ಶಸ್ತ್ರಚಿಕಿತ್ಸೆ : 2 ತಿಂಗಳ ಬಳಿಕ ಮತ್ತೊಂದು ಸರ್ಜರಿ!

ತಾಂತ್ರಿಕ ಅಂಶಗಳು : ಲೋಕಿ ತವಸ್ಯ ಅವರ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. “ವೈಬ್ ಆಗಿದೆ..” ಮತ್ತು “ನೀನು ನನಗಂತ ಬರೆದ ಭಗವಂತ” ಹಾಡುಗಳು ಕಿವಿಗೆ ಹಿತವಾಗಿವೆ. “ಹೇಟ್ ಯು ಡ್ಯಾಡಿ ಹೇಟ್ ಯು ಮಮ್ಮಿ” ಹಾಡು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಛಾಯಾಗ್ರಾಹಕ ಐಸಾಕ್ ಪ್ರಭಾಕರ್ ಚಿತ್ರಕ್ಕೆ ಸುಂದರ ದೃಶ್ಯ ವೈಭವ ನೀಡಿದ್ದಾರೆ. ಟೈಗರ್ ಶಿವು ಸಂಯೋಜಿಸಿರುವ ಆಕ್ಷನ್ ದೃಶ್ಯಗಳು ಚಿತ್ರದ ಮಾಸ್ ಅಂಶವನ್ನು ಹೆಚ್ಚಿಸಿವೆ.

‘ರಕ್ಕಿ’ ಕೇವಲ ರೌಡಿ ಕಥೆಯಲ್ಲ; ಇದು ಕುಟುಂಬ, ಪ್ರೀತಿ ಮತ್ತು ಜೀವನದ ಮೌಲ್ಯಗಳನ್ನು ಹೇಳುವ ಭಾವನಾತ್ಮಕ ಸಿನಿಮಾ. ರಕ್ತಪಾತದ ಅತಿರೇಕವಿಲ್ಲದೆ ಮನರಂಜನೆ ನೀಡುವ ಚಿತ್ರವಾಗಿ ‘ರಕ್ಕಿ’ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ.