ಧಾರವಾಡ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಬಾಯಲ್ಲಿ ಹಾಕಿಕೊಂಡ ಗುಟ್ಕಾವನ್ನು ಕಿಟಕಿಯಿಂದ ಉಗಿಯುತ್ತಿದ್ದ ವೇಳೆ ಎಂ ಸ್ಯಾಂಡ್ ಹೊತ್ತು ಸಾಗುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ರುಂಡ ಕತ್ತರಿಸಿ ರಸ್ತೆಗೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಂದಗೋಳದ ಹುಬ್ಬಳ್ಳಿ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಕೊಪ್ಪದಕೆರೆಯ ಬಳಿ ಬುಧವಾರ ಸಂಜೆ ನಡೆದಿದೆ.
ಶಿರೂರ ಗ್ರಾಮದ ನಿವಾಸಿ ಐಟಿಐ ವಿದ್ಯಾರ್ಥಿ ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಲಕ್ಷ್ಮೇಶ್ವರ ಡಿಪೋಗೆ ಸೇರಿದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಫಕ್ಕೀರೇಶ ಗುಟ್ಕಾ ಉಗಿಯಲು ಕಿಟಕಿಯಿಂದ ಇಣುಕಿದ್ದಾನೆ. ಈ ಸಂದರ್ಭದಲ್ಲಿ ಎದುರಿನಿಂದ ಎಂ-ಸ್ಯಾಂಡ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿ ಫಕ್ಕೀರೇಶನ ತಲೆಗೆ ಬಡಿದು ರುಂಡ ಕತ್ತರಿಸಿ ರಸ್ತೆಗೆ ಬಿದ್ದಿದೆ.
ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಈ ದಾರುಣ ದೃಶ್ಯ ಕಂಡು ಕಂಬನಿ ಮಿಡಿದರು.
ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಕುಂದಗೋಳ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





















