ನವದೆಹಲಿ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿದಾರರೊಬ್ಬರು ಲಖನೌ ಪೊಲೀಸ್ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಪೀಠಕ್ಕೇ ಆದೇಶಿಸಿದ ನಾಟಕೀಯ ಪ್ರಸಂಗವೊಂದು ಶುಕ್ರವಾರ ನಡೆದಿದೆ.
ಅಲಹಾಬಾದ್ ಹೈಕೋರ್ಟ್ ಆದೇಶ ವಿರುದ್ಧ ಪ್ರಬಾಲ್ ಪ್ರತಾಪ್ ಎನ್ನುವ ಅರ್ಜಿದಾರ ಮೇಲ್ಮನವಿ ಸಲ್ಲಿಸಿರುವುದಲ್ಲದೆ, ಈ ದಿನ ನ್ಯಾಯಾಲಯದಲ್ಲಿ ತಾನೇ ವಾದಿಸಿದ್ದು ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥ್ ಹಾಗೂ ಅಲೋಕ್ ಅರಾಧೆ ನ್ಯಾಯಾಂಗ ಸೇವಕರೆಂದೂ, ತಾನು ಸಾರ್ವಭೌಮ ವ್ಯಕ್ತಿ ಎಂದು ಹೇಳಿಕೊಂಡಿದ್ದಾನೆ.
ಮಾನ್ಯ ನ್ಯಾಯಾಂಗ ಸೇವಕರೇ, ಲಖನೌ ವಿಕಾಸ್‌ನಗರದ ಎಸಿಪಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾನು ನಿಮಗೆ ಆದೇಶಿಸುತ್ತೇನೆ ಎಂದಾತ ಹೇಳಿರುವುದರ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಆಗ ನ್ಯಾ.ಮೂ. ವಿಶ್ವನಾಥ್, ನೀವು ನಮಗೇ ಆದೇಶಿಸುತ್ತೀರಾ' ಎಂದು ಆಶ್ಚರ್ಯಚಕಿತರಾಗಿ ಪ್ರಶ್ನಿಸಿದರು. ಹೌದು ನಾನು ಸಾರ್ವಭೌಮ ವ್ಯಕ್ತಿ’ ಎಂದಾತ ಹೇಳಿಕೊಂಡಿದ್ದಲ್ಲದೆ, ಪ್ರಕರಣದ ಕಾಗದಗಳನ್ನು ಗಾಳಿಯಲ್ಲಿ ತೂರಿಸುತ್ತಾ ನ್ಯಾಯಪೀಠ ನಿಂದನೆ ಮಾಡಿದ್ದರಿಂದ ತುಸುಕಾಲ ಗೊಂದಲಮಯ ವಾತಾವರಣ ಉಂಟಾಯಿತು.
ಸಿಜೆಐಯನ್ನೂ ನಿಂದಿಸಿದ ಅರ್ಜಿದಾರ: ಈ ಪತ್ರಗಳನ್ನು ಸಿಜೆಐಗೆ ಕೊಡಿ ಎನ್ನುತ್ತಾ ತನ್ನನ್ನು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋಗುವಾಗ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆ.
ಆದರೂ ಅರ್ಜಿದಾರನ ಅವಹೇಳನಕಾರಿ ವರ್ತನೆಗೆ ಯಾವುದೇ ಕ್ರಮ ಕೈಗೊಳ್ಳದ ನ್ಯಾಯಾಧೀಶರು, ಪ್ರಕರಣದ ದಾಖಲೆಗಳು ಅರ್ಹತೆಗಳನ್ನು ಪರಿಶೀಲಿಸಿದ ನಂತರ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರನ ವಿಶೇಷ ಅನುಜ್ಞಾ ಅರ್ಜಿಯನ್ನೂ ವಜಾಗೊಳಿಸಿದ್ದಾರೆ.




















