SK Home Ad
Home ನಮ್ಮ ಜಿಲ್ಲೆ ಧಾರವಾಡ HDMCಯಲ್ಲಿ ಕಮಲ ಮುಡಿಗೆ ಮೇಯರ್-ಉಪಮೇಯರ್ ಪಟ್ಟ!

HDMCಯಲ್ಲಿ ಕಮಲ ಮುಡಿಗೆ ಮೇಯರ್-ಉಪಮೇಯರ್ ಪಟ್ಟ!

0
98

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (HDMC) 25ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ್ದು, ದುರ್ಗಮ್ಮ ಬಿಜವಾಡ ಅವರು ನೂತನ ಮೇಯರ್ ಆಗಿ ಹಾಗೂ ರತ್ನಾಬಾಯಿ ನಾಝರೆ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಎಸ್‌ಸಿ ಮಹಿಳೆ ಮೀಸಲಾಗಿದ್ದರೆ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 69ರ ಸದಸ್ಯೆ ದುರ್ಗಮ್ಮ ಬಿಜವಾಡ ಸ್ಪರ್ಧಿಸಿದ್ದರೆ, ಉಪಮೇಯರ್ ಸ್ಥಾನಕ್ಕೆ ಧಾರವಾಡದ ವಾರ್ಡ್ ಸಂಖ್ಯೆ 9ರ ಸದಸ್ಯೆ ರತ್ನಾಬಾಯಿ ನಾಝರೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ

ಇನ್ನೊಂದೆಡೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ಸಂಖ್ಯೆ 20ರ ಕವಿತಾ ಕಬ್ಬೇರ್ ಮೇಯರ್ ಸ್ಥಾನಕ್ಕೆ ಹಾಗೂ ವಾರ್ಡ್ ಸಂಖ್ಯೆ 6ರ ದಿಲ್ಶಾದ್ ಬೇಗಂ ನದಾಫ್ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು.

50 ಮತಗಳೊಂದಿಗೆ ಬಿಜೆಪಿ ಅಭ್ಯರ್ಥಿಗಳ ಗೆಲುವು : ಮತದಾನದ ಬಳಿಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ದುರ್ಗಮ್ಮ ಬಿಜವಾಡ ಹಾಗೂ ರತ್ನಾಬಾಯಿ ನಾಝರೆ ತಲಾ 50 ಮತಗಳನ್ನು ಪಡೆದು ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ 35 ಮತಗಳು ಲಭಿಸಿದರೆ, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವಹಿದಾ ಖಾನಂ ಕಿತ್ತೂರು ಅವರಿಗೆ 3 ಮತಗಳು ದೊರಕಿದವು.

ಇದನ್ನೂ ಓದಿ: ಮೀಸಲಾತಿಗೆ ಜಾತಿಗಿಂತ ಆರ್ಥಿಕ ಸ್ಥಿತಿ ಮುಖ್ಯ: ಶ್ರೀಶೈಲ ಜಗದ್ಗುರುಗಳು

ಬಿಜೆಪಿ ನಾಯಕರ ಬೆಂಬಲ : ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಎಂ. ನಾಗರಾಜ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ ಹಾಗೂ ಲಿಂಗರಾಜ ಪಾಟೀಲ್ ಬೆಂಬಲ ಸೂಚಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಫ್. ಜಕ್ಕಪ್ಪನವರ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಉಡುಪಿ: ₹70 ಲಕ್ಷ ವಂಚನೆ, ಜೀವ ಬೆದರಿಕೆ ಹಾಕಿದ್ದ ಲೇಡಿ ಬಂಧನ

ಅಧಿಕೃತ ಘೋಷಣೆ, ಬಿಜೆಪಿ ಸಂಭ್ರಮ : ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರು ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು. ಫಲಿತಾಂಶ ಹೊರಬಿದ್ದ ಕೂಡಲೇ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ದುರ್ಗಮ್ಮ ಬಿಜವಾಡ ರಾಜಕೀಯ ಪಯಣ : ದುರ್ಗಮ್ಮ ಬಿಜವಾಡ ಅವರು ಮೊದಲಿಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಾಲಿಕೆಯ 23ನೇ ಅವಧಿಯಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ಇದೀಗ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಬದುಕಿನಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಾಗಾಟಕ್ಕೆ ಬ್ರೇಕ್: ₹97 ಸಾವಿರ ಮೌಲ್ಯದ ಪಡಿತರ ಅಕ್ಕಿ ಜಪ್ತಿ

ನೂತನ ಮೇಯರ್ ಹಾಗೂ ಉಪಮೇಯರ್ ನಗರಾಭಿವೃದ್ಧಿ, ಮೂಲಸೌಕರ್ಯ, ಸ್ವಚ್ಛತೆ, ಕುಡಿಯುವ ನೀರು ಹಾಗೂ ನಾಗರಿಕ ಸೇವೆಗಳ ಸುಧಾರಣೆಗೆ ಆದ್ಯತೆ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.