ಉಡುಪಿ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಶನಿವಾರ ಮುಂಜಾನೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
Z-ಪ್ಲಸ್ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸತೀಶನ್ ಅವರು ಮುಂಜಾನೆಯೇ ದೇವಾಲಯ ಪ್ರವೇಶಿಸಿ, ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಪೂಜೆ ಬಳಿಕ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಹೊಸ ಡೇಟ್ ಫಿಕ್ಸ್
ಕೇರಳ ಮುಖ್ಯಮಂತ್ರಿಯಾದ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಅವರ ಮೊದಲ ಭೇಟಿ ಇದಾಗಿದೆ. ಸತೀಶನ್ ಅವರು ಮೂಕಾಂಬಿಕಾ ದೇವಿಯ ಅಪಾರ ಭಕ್ತರಾಗಿದ್ದು, ಹಲವು ವರ್ಷಗಳಿಂದ ವೈಯಕ್ತಿಕವಾಗಿ ದೇವಿಯ ದರ್ಶನ ಪಡೆಯುತ್ತಾ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಭಕ್ತರ ಸಂಚಾರಕ್ಕೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
ಇದನ್ನೂ ಓದಿ: EPFO ಬಿಗ್ ಅಪ್ಡೇಟ್: ATM ಮತ್ತು UPI ಮೂಲಕವೂ ಸಿಗಲಿದೆ PF ಹಣ!
ಮುಂಜಾನೆಯ ಪೂಜೆ ಮತ್ತು ದೇವಿಯ ದರ್ಶನದ ಬಳಿಕ ಸತೀಶನ್ ಅವರು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಕೇರಳ ಮತ್ತು ಕರ್ನಾಟಕದ ಸಾವಿರಾರು ಭಕ್ತರ ಆರಾಧ್ಯ ದೈವವಾದ ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕಾಗಿ ಪ್ರತಿವರ್ಷ ಅನೇಕ ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ಗಣ್ಯರು ಕೊಲ್ಲೂರಿಗೆ ಭೇಟಿ ನೀಡುತ್ತಿದ್ದು, ಇದೀಗ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಭೇಟಿಯೂ ವಿಶೇಷ ಗಮನ ಸೆಳೆದಿದೆ.




















