ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶನಿವಾರ ಸಂಜೆ ಸಿಎಲ್‌ಪಿ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಡಿ.ಕೆ. ಶಿವಕುಮಾರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ, ಡಿ.ಕೆ. ಶಿವಕುಮಾರ್ ಅವರೊಂದಿಗಿನ ನನ್ನ ಬಾಂಧವ್ಯ ಬಹಳ ಹಳೆಯದು ಮತ್ತು ಭಾವನಾತ್ಮಕವಾದದ್ದು. ಅವರು ನನ್ನ ತಂದೆಯವರ ಆತ್ಮೀಯ ಒಡನಾಡಿಯಾಗಿದ್ದರು. ಅಷ್ಟೇ ಅಲ್ಲದೆ, ನಮ್ಮ ರಂಭಾಪುರಿ ಪೀಠದ ವೀರ ಗಂಗಾಧರ ಜಗದ್ಗುರುವಿನ ಶಿಷ್ಯರಾಗಿ, ನನ್ನ ಜೀವನದ ಪ್ರತಿ ಹಂತದಲ್ಲೂ ನನಗೆ ಒಬ್ಬ ಮಾರ್ಗದರ್ಶಕರಾಗಿ, ಪ್ರೇರಣೆಯಾಗಿ ಮತ್ತು ದಾರಿದೀಪವಾಗಿ ನಿಂತಿದ್ದಾರೆ ಎಂದರು.
ಅವರಲ್ಲಿರುವ ಸಂಘಟನಾ ಚತುರತೆ, ಬದ್ಧತೆ ಮತ್ತು ಕಷ್ಟದ ಸಮಯದಲ್ಲೂ ಸ್ಥಿರವಾಗಿ ನಿಲ್ಲುವ ಗುಣ ನಮಗೆಲ್ಲರಿಗೂ ಆದರ್ಶಪ್ರಾಯ. ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯವು ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲಿದೆ ಮತ್ತು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಅವರು ಯಶಸ್ವಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವೀರೇಶ್ ಕಡಕೊಳಮಠ, ಷರೀಫ್ ಗರ್ಗದ, ಪಾಲಿಕೆ ಸದಸ್ಯ ಸೆಂಥಿಲ್ ಕುಮಾರ್, ಸಾಧಿಕ್ ಯಕ್ಕುಂಡಿ, ಸುವರ್ಣ ಕಲ್ಲಕುಂಟ್ಲ, ಇಕ್ಬಾಲ್ ನವಲೂರ, ಸಂಗಮೇಶ್ ಗೌರಕ್ಕನವರ, ಮದಾರ್ ಮಕಾಂದರ, ಸಂತೋಷ್ ನಾಯಕ್, ಮಹೇಶ್, ದೀಪಕ್, ರಘುವೀರ್ ಪಾಟೀಲ್, ಬಸವರಾಜ್ ಮ್ಯಾಗೆಡಿ, ಪರ್ವೇಜ್ ಕಟ್ಟಿಮನಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮತ್ತು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.






















