ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಸೆ. 5 ಹಾಗೂ 6ರಂದು ಭಾರತೀಯ ಪಾರಂಪರಿಕ ಜ್ಞಾನವ್ಯವಸ್ಥೆ 3ನೇ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಐಐಟಿ ಧಾರವಾಡ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಸೆ. 5ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯುವುದು. ಐಐಟಿ ಧಾರವಾಡ ಹಾಗೂ ಭಾರತೀಯ ಜ್ಞಾನ ಪದ್ಧತಿಗಳ ಶ್ರೇಷ್ಠತಾ ಕೇಂದ್ರ, ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ, ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ, ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗದ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.
2 ದಿನಗಳ ಸಮ್ಮೇಳನದಲ್ಲಿ ಭಾರತೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಸಮಕಾಲೀನ ಪ್ರಸ್ತುತತೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕಲೆ ಮೊದಲಾದ ವಿಷಯಗಳ ಕಲಿಕೆಯಲ್ಲಿ ಅನ್ವಯ ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದರು.
ಸಮ್ಮೇಳನದಲ್ಲಿ 12 ಆಹ್ವಾನಿತ ಉಪನ್ಯಾಸಗಳು, 24 ಮೌಖಿಕ ಪ್ರಸ್ತುತಿಗಳು, 20 ಪೋಸ್ಟರ್ ಪ್ರಸ್ತುತಿಗಳು ನಡೆಯಲಿವೆ. ಐಐಟಿಗಳು, ಎನ್‌ಐಟಿಗಳು, ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಶೈಕ್ಷಣಿಕ ಮತ್ತು ಸಂಸ್ಥೆಗಳ ವಿದ್ವಾಂಸರು ಹಾಗೂ ಸಂಶೋಧಕರು ಪಾಲ್ಗೊಳ್ಳುವರು ಎಂದು ಹೇಳಿದರು.
ಪ್ರಾಚೀನ ಭಾರತೀಯ ತಂತ್ರಜ್ಞಾನಗಳ ಪ್ರಸ್ತುತತೆ, ಯುವಜನರ ಮೇಲೆ ಭಾರತೀಯ ಜ್ಞಾನ ಪದ್ಧತಿಗಳ ಪರಿಣಾಮ, ಆಯುರ್ವೇದ ಯೋಗ ಸೂತ್ರಗಳು, ವೈದಿಕ ವಿಜ್ಞಾನ, ಆಧುನಿಕ ವಿಜ್ಞಾನದೊಂದಿಗೆ ಭಾರತೀಯ ಜ್ಞಾನ ಪದ್ಧತಿಗಳ ಮರು ಸಂಯೋಜನೆ ಕುರಿತು ವಿಚಾರ ಮಂಡನೆ ನಡೆಯಲಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ಮತ್ತು ಆಯುರ್ವೇದ ಮೂಲಕ ರೋಗ ನಿರ್ಣಯ, ಪಾರಂಪರಿಕ ಕಟ್ಟಡಗಳ ಭೂಕಂಪನ ನಿರೋಧಕ ಮೌಲ್ಯಮಾಪನ, ದೇವಸ್ಥಾನಗಳ ವಾಸ್ತುಶಿಲ್ಪ, ಆಡಳಿತ ಹಾಗೂ ಪಾರಂಪರಿಕ ಜ್ಞಾನ ಸೇರಿದಂತೆ ಹಲವು ಅಂತರ್‌ಶಿಸ್ತೀಯ ಸಂಶೋಧನೆಗಳು ಮಂಡನೆಯಾಗಲಿವೆ ಎಂದರು.






















