Home Advertisement
Home ನಮ್ಮ ಜಿಲ್ಲೆ ಧಾರವಾಡ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ: ಹೊಸ ಲೇಬರ್ ಕೋಡ್ ಜಾರಿಗೆ ಒತ್ತು

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ: ಹೊಸ ಲೇಬರ್ ಕೋಡ್ ಜಾರಿಗೆ ಒತ್ತು

0
93

ಹುಬ್ಬಳ್ಳಿ: ದೇಶದ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ಈಗಾಗಲೇ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸ ಲೇಬರ್ ಕೋಡ್‌ಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ವತಿಯಿಂದ ಆಯೋಜಿಸಲಾದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.

ಸಾಮಾಜಿಕ ಭದ್ರತೆಗೆ ಒತ್ತು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶದ ಎಲ್ಲಾ ವರ್ಗದ ಕಾರ್ಮಿಕರಿಗೆ ಪಿಂಚಣಿ ಹಾಗೂ ESIC ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ. ಗಿಗ್ ವರ್ಕರ್‌ಗಳು, ಕೃಷಿ ಕಾರ್ಮಿಕರು,
ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೂ ಸಹ ಸಾಮಾಜಿಕ ಭದ್ರತೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.

ಪ್ರಸ್ತುತ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ₹13,000–14,000 ಕೋಟಿ ಮೀಸಲಿಟ್ಟಿದ್ದು, ಮುಂದಿನ ಅಗತ್ಯಗಳ ಕುರಿತು ಅಧ್ಯಯನ ನಡೆಯುತ್ತಿದೆ.

ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ : ದೇಶದ ಸುಮಾರು 90% ಕಾರ್ಮಿಕರು ESIC ಮತ್ತು EPF ವ್ಯಾಪ್ತಿಯಿಂದ ಹೊರಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು e-Shram Portal ನಲ್ಲಿ 32 ಕೋಟಿಗೂ ಹೆಚ್ಚು ಕಾರ್ಮಿಕರು ನೋಂದಾಯಿಸಿದ್ದಾರೆ. ಉಚಿತ ಚಿಕಿತ್ಸೆ ಎಲ್ಲಾ ವರ್ಗಕ್ಕೂ ವಿಸ್ತರಣೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚ ಭರಿಸುವ ವ್ಯವಸ್ಥೆಯ ಕ್ರಮಗಳು ಜಾರಿಯಾಗಲಿವೆ.

ಲೇಬರ್ ಕೋಡ್ – ಹೊಸ ದಿಕ್ಕು : ಬ್ರಿಟಿಷರ ಕಾಲದ ಹಳೆಯ ಕಾನೂನುಗಳನ್ನು ಬದಲಿಸಿ, ಭಾರತೀಯ ಪರಿಸ್ಥಿತಿಗೆ ಹೊಂದುವ ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, 8 ಗಂಟೆಗಳ ಕೆಲಸದ ಅವಧಿ, ಕಾರ್ಮಿಕರ ಹಕ್ಕುಗಳ ಬಲಪಡಿಸುವಲ್ಲಿ ಸಹಕಾರಿ ಆಗಲಿದೆ.

PF ಹಣ ATM ಮೂಲಕ ಪಡೆಯುವ ಯೋಜನೆ : ಮುಂದಿನ ದಿನಗಳಲ್ಲಿ ಕಾರ್ಮಿಕರು ತಮ್ಮ PF ಹಣವನ್ನು ATM ಮೂಲಕ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕರಂದ್ಲಾಜೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಆರೋಪ : ಕರ್ನಾಟಕ ಸರ್ಕಾರದ ವಿರುದ್ಧ ಟೀಕಿಸಿದ ಅವರು ಕಾರ್ಮಿಕರ ಕಲ್ಯಾಣ ನಿಧಿಗೆ ಸರಿಯಾದ ಬಳಕೆ ಇಲ್ಲ, ಕಟ್ಟಡ ಕಾರ್ಮಿಕರ ಸೆಸ್ ಮೂಲಕ ವರ್ಷಕ್ಕೆ ₹15,000 ಕೋಟಿ ಸಂಗ್ರಹವಾಗುತ್ತಿದೆ, ಆದರೆ ಕಾರ್ಮಿಕರ ನಿಜವಾದ ಪ್ರಯೋಜನಕ್ಕೆ ಬಳಸಲಾಗುತ್ತಿಲ್ಲ ಎಂದು ಆರೋಪಿಸಿದರು.

2047ರ ವಿಕಸಿತ ಭಾರತ ಗುರಿ : 2047ರೊಳಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸಲು ಕಾರ್ಮಿಕರು ಮಹತ್ವದ ಪಾತ್ರ ವಹಿಸಬೇಕಿದೆ. ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವಿನ ಉತ್ತಮ ಸಂಬಂಧವೇ ದೇಶದ ಆರ್ಥಿಕ ಬೆಳವಣಿಗೆಯ ಆಧಾರ ಎಂದು ಅವರು ಹೇಳಿದರು.