
ಲಿಂಗಸೂರು (ಹಟ್ಟಿ) : ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿಯು ಹಟ್ಟಿ ಚಿನ್ನದ ಗಣಿ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಜಮೀನುಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಹೋರಾಟದ ಸ್ಥಳಕ್ಕೆ ಬಂದು ಸ್ಪಷ್ಟಪಡಿಸುವಂತೆ ಕಂಪನಿಗೆ ಬಹಿರಂಗ ಸವಾಲು ಹಾಕಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯು, ಕಂಪನಿಯ ಪ್ರಭಾರ ಪ್ರಧಾನ ವ್ಯವಸ್ಥಾಪಕರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ರೈತರ ಹೋರಾಟದ ಹಕ್ಕನ್ನು ಕುಗ್ಗಿಸುವ ಪ್ರಯತ್ನ ನಡೆಸಿದ್ದು, ಇದು ರೈತರನ್ನು ದಾರಿ ತಪ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಕ್ರಮವಾಗಿದೆ ಎಂದು ಆರೋಪಿಸಿದೆ.
ಸಮಿತಿಯ ಪ್ರಕಾರ, 2026ರ ಏಪ್ರಿಲ್ 23ರಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಜೆ.ಟಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ತಿಂಗಳೊಳಗೆ ಭೂ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸಮಿತಿ ದೂರಿದೆ.
ಇದಲ್ಲದೆ, ರೈತರ ಜಮೀನನ್ನು ಕಂಪನಿಯ ಲೀಸ್ ಭೂಮಿಯೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆ ಪಡೆದಿರುವುದು ಕಾನೂನುಬದ್ಧವೇ ಎಂಬ ಪ್ರಶ್ನೆಯನ್ನು ಸಮಿತಿ ಎತ್ತಿದೆ. ಲಿಂಗಸುಗೂರು ಉಪನೋಂದಣಿ ಕಚೇರಿ ದಾಖಲೆಗಳ ಪ್ರಕಾರ 1968ರಲ್ಲಿ 1305 ಎಕರೆ ಭೂಮಿಯನ್ನು ನಾಲ್ಕು ಚೆಕ್‌ಬಂದಿಗಳ ಮೂಲಕ ಗಣಿಗಾರಿಕೆ ಗುತ್ತಿಗೆಗೆ ಪಡೆದಿರುವ ಮಾಹಿತಿ ಇದೆ. ಆದರೆ ಕಂಪನಿಯ ಪ್ರಕಟಣೆಯಲ್ಲಿ 1987ರಲ್ಲಿ 1305 ಎಕರೆ ಗುತ್ತಿಗೆ ಪಡೆದಿರುವುದಾಗಿ ಉಲ್ಲೇಖಿಸಿರುವುದು ಪರಸ್ಪರ ವಿರೋಧಾಭಾಸವಾಗಿದೆ ಎಂದು ಸಮಿತಿ ತಿಳಿಸಿದೆ.
ಅದೇ ರೀತಿ, ಕಂಪನಿಯೇ ಈ ಹಿಂದೆ 1305 ಎಕರೆ ಪೈಕಿ 905 ಎಕರೆ ಭೂಸ್ವಾಧೀನಗೊಂಡಿರುವುದಾಗಿ ಲಿಖಿತ ಮಾಹಿತಿ ನೀಡಿದ್ದರೂ, ಇತ್ತೀಚಿನ ಪ್ರಕಟಣೆಯಲ್ಲಿ ಕೇವಲ 826 ಎಕರೆ ಎಂದು ಹೇಳಿರುವುದನ್ನು ಸಮಿತಿ ಪ್ರಶ್ನಿಸಿದೆ. ರೈತರ ಭೂ ದಾಖಲೆಗಳ ಇಸಿ (Encumbrance Certificate)ಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಹೆಸರು ದಾಖಲಾಗಿರುವುದರಿಂದ ಉಂಟಾಗಿರುವ ಸಮಸ್ಯೆಗೆ ಕಂಪನಿಯೇ ಹೊಣೆ ಎಂದು ಆರೋಪಿಸಲಾಗಿದೆ.
ಭಾರತ ಸರ್ಕಾರದ ಎಂಎಸ್‌ಇಸಿಎಲ್ ಸಂಸ್ಥೆಯ ಮೂಲಕ ವೈಜ್ಞಾನಿಕ ಪರಿಶೋಧನೆ ನಡೆಸಲಾಗುತ್ತಿದೆ ಎಂಬ ಕಂಪನಿಯ ಹೇಳಿಕೆಯನ್ನು ಉಲ್ಲೇಖಿಸಿರುವ ಸಮಿತಿ, ಪರಿಶೋಧನೆ ನಡೆಯುತ್ತಿರುವುದು ಕಂಪನಿಯ ಭೂಮಿಯಲ್ಲೋ ಅಥವಾ ರೈತರ ಖಾಸಗಿ ಜಮೀನಿನಲ್ಲೋ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದೆ. ರೈತರ ಜಮೀನಿನಲ್ಲಿ ಪರಿಶೋಧನೆ ನಡೆಸುತ್ತಿದ್ದರೆ ಅದಕ್ಕೆ ಕಾನೂನುಬದ್ಧ ಅಧಿಕಾರವೇನು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.
ಜುಲೈ 27ರಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ರೈತರ ಭೂಹಕ್ಕು ರಕ್ಷಣೆಗಾಗಿ ಹಾಗೂ 400 ಎಕರೆ ಪಟ್ಟಾ ಭೂಮಿಯಲ್ಲಿ ಕಂಪನಿಯ ಹೆಸರನ್ನು ನೋಂದಾಯಿಸಿರುವುದರಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಡೆಯುತ್ತಿರುವ ನ್ಯಾಯಬದ್ಧ ಹೋರಾಟವಾಗಿದೆ ಎಂದು ಸಮಿತಿ ತಿಳಿಸಿದೆ.
ಕಂಪನಿಯು ಪತ್ರಿಕಾ ಪ್ರಕಟಣೆಗಳ ಮೂಲಕ ರೈತರ ಹೋರಾಟವನ್ನು ಅಪಮಾನಿಸುವ ಬದಲು, ತಮ್ಮ ಬಳಿ ಸೂಕ್ತ ದಾಖಲೆಗಳಿದ್ದರೆ ಸಾರ್ವಜನಿಕರ ಎದುರು ಮಂಡಿಸಲಿ ಎಂದು ಸಮಿತಿ ಮುಖಂಡರಾದ ಬಾಬು ನಾಯಿಕೊಡಿ, ಕೆ. ಶಿವಾನಂದ, ಶಿವಪುತ್ರಪ್ಪ ಹಟ್ಟಿ ಹಾಗೂ ಸುರೇಶಗೌಡ ಪೊ.ಪಾ. ಅವರು ಆಗ್ರಹಿಸಿದ್ದಾರೆ.




















