ಚಿತ್ರದುರ್ಗ: ಬರದ ಛಾಯೆಯಿಂದ ತತ್ತರಿಸಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಬಹುತೇಕ ಕೆರೆ-ಕಟ್ಟೆಗಳು ಹಾಗೂ ಕೊಳವೆಬಾವಿಗಳು ಬರಿದಾಗಿರುವ ನಡುವೆಯೇ ಚಿತ್ರದುರ್ಗ ತಾಲೂಕಿನ ಗುಡ್ಡದರಂಗವ್ವನಹಳ್ಳಿ ಗ್ರಾಮದ ಬಾಬುರೆಡ್ಡಿ ಅವರ ತೋಟದಲ್ಲಿರುವ ಕೊಳವೆಬಾವಿಯಿಂದ ನೀರು ಉಕ್ಕುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
ಭೀಕರ ಬರಗಾಲದ ನಡುವೆಯೇ ಕೊಳವೆಬಾವಿಯಿಂದ ನಿರಂತರವಾಗಿ ನೀರು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಈ ಅಪರೂಪದ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ನೀರು ಉಕ್ಕಲು ನಿಖರ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಸ್ಥಳೀಯರು ಮಾತ್ರ ಇದನ್ನು ಪ್ರಕೃತಿಯ ವಿಶೇಷ ಬೆಳವಣಿಗೆ ಎಂದು ಚರ್ಚಿಸುತ್ತಿದ್ದಾರೆ.






















