ದಕ್ಷಿಣ ಭಾರತದ ಮೊದಲ ‘ವೇಸ್ಟ್ ಟು ಚಾರ್ಕೋಲ್’ ಘಟಕ ಹುಬ್ಬಳ್ಳಿಯಲ್ಲಿ: ಪ್ರತಿದಿನ 200 ಟನ್ ಕಸ ಸಂಸ್ಕರಣೆ – ₹157 ಕೋಟಿ ವೆಚ್ಚದ ತ್ಯಾಜ್ಯದಿಂದ ಹಸಿರು ಇದ್ದಿಲು ಘಟಕ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ ‘ಕಸದಿಂದ ಇಂಧನ’ (Waste-to-Energy) ಯೋಜನೆ ಮಹತ್ವದ ಹಂತ ತಲುಪಿದ್ದು, ಯೋಜನೆಯ ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಗಬ್ಬೂರು ಸಮೀಪ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಮೊದಲ ಹಾಗೂ ಅತ್ಯಾಧುನಿಕ ಪರಿಸರ ಸ್ನೇಹಿ ‘ವೇಸ್ಟ್ ಟು ಚಾರ್ಕೋಲ್’ ಘಟಕಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.
ಇದನ್ನೂ ಓದಿ: ISSF ವಿಶ್ವ ಜೂನಿಯರ್ ಶೂಟಿಂಗ್: ಹುಬ್ಬಳ್ಳಿಯ ಐಶ್ವರ್ಯಾಗೆ ಬೆಳ್ಳಿ ಪದಕ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಹಾಗೂ ಎನ್‌ಟಿಪಿಸಿಯ ಅಂಗಸಂಸ್ಥೆಯಾದ ಎನ್‌ವಿವಿಎನ್ (NVVN) ಸಹಭಾಗಿತ್ವದಲ್ಲಿ ₹157 ಕೋಟಿ ವೆಚ್ಚದಲ್ಲಿ 8 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣವಾಗುತ್ತಿದೆ. ಪ್ರತಿದಿನ ಸುಮಾರು 200 ಟನ್ ಒಣ ಕಸವನ್ನು ಸಂಸ್ಕರಿಸಿ, 120 ಟನ್ ‘ಟೊರಿಫೈಡ್ ಚಾರ್ಕೋಲ್’ ಅಥವಾ ಹಸಿರು ಇದ್ದಿಲು ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕಿದೆ.
ಈಗಾಗಲೇ ಘಟಕದಲ್ಲಿ ಸತತ 72 ಗಂಟೆಗಳ ಕಾಲ ಯಶಸ್ವಿ ಟ್ರಯಲ್ ರನ್ ನಡೆಸಲಾಗಿದ್ದು, ಸುಮಾರು 250 ಟನ್ ಚಾರ್ಕೋಲ್ ಉತ್ಪಾದಿಸಲಾಗಿದೆ. ತ್ಯಾಜ್ಯದಿಂದ ಶೇ.30ರಿಂದ 35ರಷ್ಟು ಹಸಿರು ಇದ್ದಿಲು ತಯಾರಿಸುವ ತಂತ್ರಜ್ಞಾನವನ್ನು ಹೊಂದಿರುವ ರಾಜ್ಯದ ಮೊದಲ ಘಟಕ ಇದಾಗಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಪ್ರಕರಣ: ಟ್ರಸ್ಟ್‌ನ ಇಬ್ಬರು ಪ್ರಮುಖರ ರಾಜೀನಾಮೆ
ಅವಳಿ ನಗರದಲ್ಲಿ ಪ್ರತಿದಿನ 500ರಿಂದ 600 ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಸುಮಾರು 200 ಟನ್ ಒಣ ಕಸವನ್ನು ಈ ಘಟಕವೇ ಸಂಸ್ಕರಿಸಲಿದೆ. ಇದರಿಂದ ನಗರದಲ್ಲಿನ ಕಸದ ಗುಡ್ಡೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಇಲ್ಲಿ ಉತ್ಪಾದನೆಯಾಗುವ ಹಸಿರು ಇದ್ದಿಲನ್ನು ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಇದರಿಂದ ಶೇ.60ರಿಂದ 70ರಷ್ಟು ಕಲ್ಲಿದ್ದಲು ಬಳಕೆ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಉತ್ತೇಜನ ಸಿಗಲಿದೆ.
ಇದನ್ನೂ ಓದಿ: ತಾಂತ್ರಿಕ ನಿರ್ವಹಣೆ ಹಿನ್ನೆಲೆ: ಇಂದು ಇಡೀ ದಿನ KEA ಹೆಲ್ಪ್‌ಲೈನ್ ಬಂದ್
ಈ ಯೋಜನೆ ‘ಸ್ವಚ್ಛ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ ಸಂಕಲ್ಪಗಳಿಗೆ ಪೂರಕವಾಗಿದ್ದು, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ದೇಶದ ಮಾದರಿ ಯೋಜನೆಯಾಗಲಿದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.






















