ದೇಣಿಗೆ ದುರುಪಯೋಗ ಆರೋಪದ ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್‌ನ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ
ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಭಕ್ತರಿಂದ ಸಂಗ್ರಹಿಸಲಾದ ದೇಣಿಗೆಗಳ ದುರುಪಯೋಗ ಆರೋಪದ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮ ಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆಯಲ್ಲಿ ₹7 ಕೋಟಿ ರಿಂದ ₹7.5 ಕೋಟಿ ಮೊತ್ತದವರೆಗೆ ಅಕ್ರಮ ನಡೆದಿದೆ ಎಂದು ಅಯೋಧ್ಯೆಯ ಮಾಜಿ ಸಮಾಜವಾದಿ ಪಕ್ಷದ ಶಾಸಕ ಪವನ್ ಪಾಂಡೆ ಆರೋಪಿಸಿದ್ದರು. ಈ ಆರೋಪಗಳ ಬೆನ್ನಲ್ಲೇ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ, ಟಿನ್ನು ಯಾದವ್, ಮನೀಶ್ ಯಾದವ್ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ISSF ವಿಶ್ವ ಜೂನಿಯರ್ ಶೂಟಿಂಗ್: ಹುಬ್ಬಳ್ಳಿಯ ಐಶ್ವರ್ಯಾಗೆ ಬೆಳ್ಳಿ ಪದಕ
ಆರೋಪಗಳು ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 14ರಂದು ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಸಿದ ಬಳಿಕ ಮೊದಲ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದೇ ವೇಳೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. ಡಿಯೋರಿಯಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದು, ಸತ್ಯಾಂಶವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಂತ್ರಿಕ ನಿರ್ವಹಣೆ ಹಿನ್ನೆಲೆ: ಇಂದು ಇಡೀ ದಿನ KEA ಹೆಲ್ಪ್‌ಲೈನ್ ಬಂದ್
“ಯಾರ ಬಳಿ ಯಾವುದೇ ಪುರಾವೆಗಳಿದ್ದರೂ ಅದನ್ನು ಎಸ್‌ಐಟಿ ಮುಂದೆ ಸಲ್ಲಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅನಗತ್ಯ ಆರೋಪ-ಪ್ರತ್ಯಾರೋಪಗಳನ್ನು ನಿಲ್ಲಿಸಬೇಕು” ಎಂದು ಯೋಗಿ ಮನವಿ ಮಾಡಿದ್ದಾರೆ.
ರಾಮ ಮಂದಿರದಂತಹ ದೇಶದ ಭಾವನಾತ್ಮಕ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉನ್ನತ ಮಟ್ಟದ ಟ್ರಸ್ಟ್ ಪದಾಧಿಕಾರಿಗಳ ರಾಜೀನಾಮೆ ರಾಷ್ಟ್ರ ರಾಜಕೀಯದಲ್ಲೂ ಚರ್ಚೆಗೆ ಕಾರಣವಾಗಿದೆ.




















