ಬೆಂಗಳೂರು: ರಾಜ್ಯ ಡಾಟಾ ಸೆಂಟರ್‌ನಲ್ಲಿ ಮಹತ್ವದ ತಾಂತ್ರಿಕ ನಿರ್ವಹಣೆ, ಮೂಲಸೌಕರ್ಯ ನವೀಕರಣ ಹಾಗೂ ಭದ್ರತಾ ಸುಧಾರಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ಸಹಾಯವಾಣಿ ಹಾಗೂ ಆನ್‌ಲೈನ್ ಸೇವೆಗಳನ್ನು ಜೂನ್ 26ರಂದು ಇಡೀ ದಿನ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ಪ್ರಕಟಣೆ ಹೊರಡಿಸಿದ್ದು, ಜೂನ್ 26ರಂದು ಬೆಳಿಗ್ಗೆಯಿಂದ ರಾತ್ರಿ ತನಕ KEA ಸಹಾಯವಾಣಿ ಸಂಖ್ಯೆ 080-23460460 ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ, ಪ್ರಾಧಿಕಾರದ ವಿವಿಧ ಆನ್‌ಲೈನ್ ಸೇವೆಗಳು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಈ ಅವಧಿಯಲ್ಲಿ ಯಾವುದೇ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರಾಜ್ಯ ಡಾಟಾ ಸೆಂಟರ್‌ನಲ್ಲಿ ನಡೆಯಲಿರುವ ತಾಂತ್ರಿಕ ನಿರ್ವಹಣೆ ಮತ್ತು ಭದ್ರತಾ ಸುಧಾರಣಾ ಕಾರ್ಯಗಳ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ವಿದ್ಯಾರ್ಥಿಗಳು ಪ್ರವೇಶ, ಅರ್ಜಿ ಸಲ್ಲಿಕೆ, ಮಾಹಿತಿ ಪರಿಶೀಲನೆ ಸೇರಿದಂತೆ ವಿವಿಧ ಆನ್‌ಲೈನ್ ಪ್ರಕ್ರಿಯೆಗಳಿಗಾಗಿ KEA ವೆಬ್‌ಸೈಟ್ ಮತ್ತು ಸಹಾಯವಾಣಿಯನ್ನು ಅವಲಂಬಿಸಿರುವುದರಿಂದ, ಸೇವೆಗಳ ಸ್ಥಗಿತದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಹಕರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮನವಿ ಮಾಡಿದೆ.



















