ಹುಬ್ಬಳ್ಳಿ: ಪಶ್ಚಿಮ ಬಂಗಾಳದಿಂದ ಗೋವಾ ರಾಜ್ಯಕ್ಕೆ ತೆರಳುತ್ತಿದ್ದ 250ಕ್ಕೂ ಹೆಚ್ಚು ಜನರನ್ನು ಬಾಂಗ್ಲಾ ನುಸುಳುಕೋರರು ಎಂಬ ಅನುಮಾನದ ಹಿನ್ನೆಲೆಯಲ್ಲಿ ಶನಿವಾರ ಗೋಕುಲ ರೋಡ್ ಹೊಸ ಬಸ್ ನಿಲ್ದಾಣದಲ್ಲಿ ತೀವ್ರ ತಪಾಸಣೆ ಮಾಡಲಾಯಿತು.
ಬೆಳಗ್ಗೆ 11.30ರ ವೇಳೆಗೆ ಹೊಸ ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ ಪಶ್ಚಿಮ ಬಂಗಾಳದ 250ಕ್ಕೂ ಹೆಚ್ಚು ಜನ ಕಾಣಿಸಿಕೊಂಡಿದ್ದರು. ಇದರಿಂದ ಅನುಮಾನಗೊಂಡ ಹಿನ್ನೆಲೆಯಲ್ಲಿ ಅಕ್ರಮ ಬಾಂಗ್ಲಾ ವಾಸಿಗಳು ಆಗಮಿಸಿದ್ದಾರೆ ಎಂದು ಹಿಂದೂ ಸಂಘಟನೆಯವರು ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಅನ್ಯ ರಾಜ್ಯದ ಕಾರ್ಮಿಕರನ್ನು ಪರಿಶೀಲಿಸಿದರು.
ಪಶ್ಚಿಮ ಬಂಗಾಳದಿಂದ ಅಮರಾವತಿ ಹುಬ್ಬಳ್ಳಿ ರೈಲ್ವೆ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ ಎನ್ನಲಾಗಿದ್ದು, ಪೊಲೀಸ್ ಅಧಿಕಾರಿಗಳು ಹೊಸ ಬಸ್ ನಿಲ್ದಾಣದ ಪೋಲಿಸ್ ಹೊರ ಠಾಣೆ ಹಾಗೂ ವಿಶ್ರಾಂತಿ ಗೃಹದಲ್ಲಿ ಸುಮಾರು 200 ಜನರ ದಾಖಲಾತಿಗಳನ್ನು ಪರಿಶೀಲಿಸಿದರು.
ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯದ ಕೂಲಿ ಕಾರ್ಮಿಕರು ಗೋವಾ ರಾಜ್ಯ ಹಾಗೂ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವವರು ಎಂದು ತಿಳಿದು ಬಂದಿದೆ.




















