ಬೆಂಗಳೂರು: ಬೇಸಿಗೆಯ ಕಡು ಬಿಸಿಲು ಮತ್ತು ಉರಿ ಎಲ್ಲರನ್ನೂ ಹೈರಾಣಾಗಿಸುತ್ತದೆ. ಆದ್ರೆ ಗರ್ಭಿಣಿ ಮಹಿಳೆಯರು ಈ ಅವಧಿಯಲ್ಲಿ ತಮ್ಮ ಆರೋಗ್ಯದ ಕಡೆಗೆ ದುಪ್ಪಟ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳಿಂದಾಗಿ ಗರ್ಭಿಣಿಯರಿಗೆ ಬೇಸಿಗೆಯ ತಾಪ ಸಾಧಾರಣಕ್ಕಿಂತ ಹೆಚ್ಚು ತೊಂದರೆ ನೀಡಬಹುದು. ಆದ್ದರಿಂದ, ಸೂಕ್ತ ಜೀವನಶೈಲಿ ಮತ್ತು ಸರಿಯಾದ ಆಹಾರ ಕ್ರಮದ ಮೂಲಕ ಗರ್ಭಾವಸ್ಥೆಯ ದಿನಗಳನ್ನು ಸುಖಕರವಾಗಿಸಿಕೊಳ್ಳಬಹುದು.
ನಿಮ್ಮ ಆಹಾರ ಶೈಲಿ ಹೀಗಿರಲಿ: ಬೇಸಿಗೆಯಲ್ಲಿ ಗರ್ಭಿಣಿಯರ ದೇಹ ಸದಾ ಹೈಡ್ರೇಟ್ ಆಗಿರಲು ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಬೇಕು. ಕಲ್ಲಂಗಡಿ, ಕರ್ಬೂಜ, ಕಿತ್ತಳೆ ಮತ್ತು ದ್ರಾಕ್ಷಿಯಂತಹ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಪ್ರತಿದಿನ ಎಳನೀರು, ಮಜ್ಜಿಗೆ ಹಾಗೂ ಮನೆಯಲ್ಲೇ ತಯಾರಿಸಿದ ತಾಜಾ ಹಣ್ಣಿನ ರಸಗಳು ದೇಹಕ್ಕೆ ತಂಪು ನೀಡುತ್ತವೆ. ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಕ್ರಿಯೆ ಸುಲಭವಾಗಲು ನಾರಿನಂಶವಿರುವ ಹಸಿರು ಎಲೆಕೋಸು, ಸೌತೆಕಾಯಿ ಹಾಗೂ ಮೊಳಕೆ ಬರಿಸಿದ ಧಾನ್ಯಗಳನ್ನು ಊಟದಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ದೂರವಿಡಬೇಕಾದ ಪದಾರ್ಥಗಳು: ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಕೆಲವು ಆಹಾರಗಳಿಂದ ದೂರವಿರಲೇಬೇಕು. ಅತಿಯಾದ ಖಾರ, ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಮಸಾಲೆಯುಕ್ತ ಆಹಾರಗಳು ಎದೆಯುರಿ ಹಾಗೂ ಅಜೀರ್ಣಕ್ಕೆ ಕಾರಣವಾಗುವುದರಿಂದ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕಾಫಿ, ಟೀ ಹಾಗೂ ಕಾರ್ಬೊನೇಟೆಡ್ ತಂಪು ಪಾನೀಯಗಳಲ್ಲಿ ಕೆಫೀನ್ ಅಂಶವಿರುವುದರಿಂದ ಅವು ದೇಹವನ್ನು ಮತ್ತಷ್ಟು ನಿರ್ಜಲೀಕರಣಗೊಳಿಸುತ್ತವೆ. ಅಲ್ಲದೆ.. ಹೊರಗಿನ ರಸ್ತೆಬದಿಯ ಆಹಾರಗಳು, ಹಸಿ ಮೀನು ಅಥವಾ ಮಾಂಸ ಮತ್ತು ಸಂಸ್ಕರಿಸಿದ (Processed) ಆಹಾರಗಳನ್ನು ತಿನ್ನಬಾರದು.
ಗಮನಕ್ಕೆ: ಗರ್ಭಿಣಿಯರು ಸಡಿಲವಾದ, ಹಗುರವಾದ ಹತ್ತಿ (ಕಾಟನ್) ಬಟ್ಟೆಗಳನ್ನು ಧರಿಸಬೇಕು. ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಅನಗತ್ಯವಾಗಿ ಹೊರಗೆ ಅಡ್ಡಾಡುವುದನ್ನು ತಪ್ಪಿಸಬೇಕು. ದಿನಕ್ಕೆ ಎರಡೂವರೆ ಇಂದ ಮೂರು ಲೀಟರ್ ನೀರು ಕುಡಿಯುವುದರ ಜೊತೆಗೆ, ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಲಘು ನಡಿಗೆಯನ್ನು ರೂಢಿಸಿಕೊಳ್ಳುವುದು ತಾಯಿ ಮತ್ತು ಮಗು ಇಬ್ಬರ ಕ್ಷೇಮಕ್ಕೂ ಅತ್ಯುತ್ತಮ.























