ಧಾರವಾಡ: ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸಾಕ್ಷ್ಯನಾಶ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಧಾರವಾಡ ಪ್ರವೇಶದ ನಿರ್ಬಂಧದ ಷರತ್ತನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ.
ಇದರೊಂದಿಗೆ ಸುದೀರ್ಘ ಅವಧಿಯಿಂದ ಸ್ವಕ್ಷೇತ್ರ ಧಾರವಾಡಕ್ಕೆ ಪ್ರವೇಶಿಸಲು ಸಾಧ್ಯವಾಗದೆ ದೂರ ಉಳಿದಿದ್ದ ವಿನಯ್ ಕುಲಕರ್ಣಿ ಅವರಿಗೆ ಕ್ಷೇತ್ರಕ್ಕೆ ಮರಳಲು ಕಾನೂನು ಅಡೆತಡೆ ನಿವಾರಣೆಯಾಗಿದೆ. ನ್ಯಾಯಾಲಯದ ಆದೇಶದಿಂದಾಗಿ ಅವರ ಬೆಂಬಲಿಗರಲ್ಲೂ ಸಂತಸ ಮೂಡಿದೆ.
ಆದರೆ ಧಾರವಾಡಕ್ಕೆ ಪ್ರವೇಶಿಸಲು ಅನುಮತಿ ದೊರೆತಿದ್ದರೂ ಕೆಲವು ಷರತ್ತುಗಳನ್ನು ನ್ಯಾಯಾಲಯ ಮುಂದುವರಿಸಿದೆ. ಕ್ಷೇತ್ರಕ್ಕೆ ಮರಳುವ ಸಂದರ್ಭದಲ್ಲಿ ಯಾವುದೇ ರೀತಿಯ ಶಕ್ತಿ ಪ್ರದರ್ಶನ, ಮೆರವಣಿಗೆ ಅಥವಾ ವಿಜಯೋತ್ಸವ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ.
ಅಲ್ಲದೆ ಪ್ರಕರಣದ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದು, ಬೆದರಿಕೆ ಹಾಕುವುದು ಅಥವಾ ಸಾಕ್ಷ್ಯಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುವ ಪ್ರಯತ್ನ ನಡೆಸುವಂತಿಲ್ಲ ಎಂಬ ಷರತ್ತನ್ನೂ ವಿಧಿಸಲಾಗಿದೆ.
ಸುದೀರ್ಘ ಕಾನೂನು ಹೋರಾಟದ ಬಳಿಕ ದೊರೆತಿರುವ ಈ ರಿಲೀಫ್‌ನಿಂದ ವಿನಯ್ ಕುಲಕರ್ಣಿ ಅವರು ಶೀಘ್ರದಲ್ಲೇ ಧಾರವಾಡಕ್ಕೆ ತೆರಳಿ ಕ್ಷೇತ್ರದ ಜನರನ್ನು ನೇರವಾಗಿ ಭೇಟಿಯಾಗುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶವು ಅವರ ರಾಜಕೀಯ ಚಟುವಟಿಕೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯೂ ವ್ಯಕ್ತವಾಗಿದೆ.




















