SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಅಕ್ರಮ ಸಂಬಂಧ: ವ್ಯಕ್ತಿಯನ್ನು ಕೊಲೆಗೈದು ಠಾಣೆಗೆ ಬಂದ ದಂಪತಿ

ಅಕ್ರಮ ಸಂಬಂಧ: ವ್ಯಕ್ತಿಯನ್ನು ಕೊಲೆಗೈದು ಠಾಣೆಗೆ ಬಂದ ದಂಪತಿ

0
2

ಬೆಳಗಾವಿ: ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಪತ್ನಿಯೊಂದಿಗೆ ಸೇರಿ ಕೊಡಲಿನಿಂದ ಕೊಚ್ಚಿ ಕೊಲೆ ಮಾಡಿದ ಬಳಿಕ ದಂಪತಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಸೋಮವಾರ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗುಜನಟ್ಟಿ ಗ್ರಾಮದ ರಮೇಶ ಹನುಮಂತ ಬಂಟ್ರೋಳಿ (40) ಕೊಲೆಯಾದ ವ್ಯಕ್ತಿ. ರಮೇಶ, ಬನಪ್ಪಾ ವಡೇರ ಅವರ ಜಮೀನನ್ನು ಪಾಲಿನ ಗುತ್ತಿಗೆ ಪಡೆದು ಕೃಷಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮೊಬೈಲ್ ಸ್ಟೇಟಸ್‌ನಿಂದ ಆಕ್ರೋಶ?: ರಮೇಶನಿಗೆ ಬನಪ್ಪಾ ವಡೇರ ಅವರ ಪತ್ನಿ ಲಕ್ಷ್ಮೀ ಅವರೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಲಕ್ಷ್ಮೀ ಅವರೊಂದಿಗೆ ಇರುವ ಫೋಟೋವನ್ನು ರಮೇಶ ತನ್ನ ಮೊಬೈಲ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಬನಪ್ಪಾ ಹಾಗೂ ಲಕ್ಷ್ಮೀ ಸೋಮವಾರ ಸಂಜೆ ಕಲ್ಲೋಳ್ಳಿ ಹದ್ದಿ ಸಮೀಪ ರಮೇಶನ ಮೇಲೆ ಕೊಡಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಠಾಣೆಗೆ ಶರಣು: ಘಟನೆ ಬಳಿಕ ಬನಪ್ಪಾ ಹಾಗೂ ಲಕ್ಷ್ಮೀ ನೇರವಾಗಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗೋಕಾಕ ಡಿವೈಎಸ್‌ಪಿ ಹಾಗೂ ಘಟಪ್ರಭಾ ಠಾಣೆಯ ಪಿಐ ಎಚ್.ಡಿ. ಮುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣ ಹಾಗೂ ಘಟನೆಯ ಇತರೆ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.