ಧಾರವಾಡ: ತಾಯಿಯ ಮಮತೆಗೆ ಮನುಷ್ಯ-ಪ್ರಾಣಿ ಎಂಬ ಭೇದವಿಲ್ಲ. ತನ್ನ ಕರುಳ ಕುಡಿಗಾಗಿ ತಾಯಿ ಎಂತಹ ಸಂಕಷ್ಟವನ್ನಾದರೂ ಎದುರಿಸುತ್ತಾಳೆ ಎಂಬುದಕ್ಕೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ನಡೆದ ಘಟನೆಯೊಂದು ಮತ್ತೊಮ್ಮೆ ಸಾಕ್ಷಿಯಾಗಿದೆ.
ಧಾರವಾಡ-ಬೈಲಹೊಂಗಲ ರಸ್ತೆಯ ಹನುಮನಾಳ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ ವಿದ್ಯುತ್ ಕಂಬ ಏರಿದ್ದ ಕೆಂಪುಮುಖದ ಮಂಗನ ಮರಿಯೊಂದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಹಿಡಿದುಕೊಂಡು ವಿದ್ಯುತ್ ಆಘಾತಕ್ಕೊಳಗಾಯಿತು. ಸಾವು-ಬದುಕಿನ ನಡುವೆ ಕಂಬದಲ್ಲೇ ನೇತಾಡುತ್ತಿದ್ದ ಮರಿ ಮಂಗವನ್ನು ಕಂಡ ರಾಹುಲ ಬಡಿಗೇರ ಎಂಬ ಯುವಕ ಕ್ಷಣಮಾತ್ರವೂ ಯೋಚಿಸದೆ ತನ್ನ ಪ್ರಾಣದ ಹಂಗು ತೊರೆದು ನೆರವಿಗೆ ಧಾವಿಸಿದರು.
ಕಟ್ಟಿಗೆಯ ಕೋಲಿನ ಸಹಾಯದಿಂದ ವಿದ್ಯುತ್ ಕಂಬದಿಂದ ಮರಿಯನ್ನು ಬೇರ್ಪಡಿಸಿದ ಅವರು, ಅದರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಆಘಾತದಿಂದ ಗಾಬರಿಗೊಂಡಿದ್ದ ಮರಿ ಮಂಗ ಕೆಳಗೆ ಬಿದ್ದ ತಕ್ಷಣ, ಪಕ್ಕದಲ್ಲಿದ್ದ ಮಲ್ಲಪ್ಪ ಕುಂಬಾರ ಅವರ ಮನೆಯೊಳಗೆ ಓಡಿ ಹೋಗಿ ಅವಿತುಕೊಂಡಿತು.
ಆದರೆ ಅಷ್ಟರಲ್ಲಾಗಲೇ ಮರಿಯ ತಾಯಿ ಮಂಗ ತನ್ನ ಮಗುವನ್ನು ಹುಡುಕುತ್ತಾ ಅಲ್ಲಿಗೆ ಬಂದಿತ್ತು. ಮನೆಯೊಳಗೆ ತನ್ನ ಮರಿ ಕಾಣದಿದ್ದಾಗ ತಾಯಿ ಮಂಗದ ಆತಂಕ ಮುಗಿಲು ಮುಟ್ಟಿತ್ತು. ಅದರೊಂದಿಗೆ ನಾಲ್ಕೈದು ಮಂಗಗಳೂ ಮನೆಯೊಳಗೆ ನುಗ್ಗಿ ಮರಿಯನ್ನು ಹುಡುಕಾಡಿದವು. ಆದರೂ ಮರಿ ಸಿಗಲಿಲ್ಲ.
ಮಗುವಿಗಾಗಿ ಕಾದು ಕುಳಿತ ತಾಯಿ: ಮನೆಯ ಮುಂದೆ ಕುಳಿತು ತನ್ನ ಮರಿಗಾಗಿ ಕಾಯತೊಡಗಿದ ತಾಯಿ ಮಂಗವನ್ನು ಅಲ್ಲಿದ್ದವರು ಓಡಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಅಲ್ಲಿಂದ ಕದಲಲಿಲ್ಲ. ತನ್ನ ಮಗು ಹೊರಬರುವವರೆಗೂ ಮನೆಯ ಮುಂದೆಯೇ ಕಾದು ಕುಳಿತಿತ್ತು.
ಕೊನೆಗೆ ಸ್ಥಳೀಯರು ಮನೆಯೊಳಗೆ ಹುಡುಕಾಟ ನಡೆಸಿದಾಗ, ಕಟ್ಟಿಗೆ ಕಂಬಗಳ ಮೇಲೆ ಗಾಬರಿಯಿಂದ ನಡುಗುತ್ತಾ ಕುಳಿತಿದ್ದ ಮರಿ ಮಂಗ ಪತ್ತೆಯಾಯಿತು. ಅದಕ್ಕೆ ನೀರು ಕುಡಿಸಲು ಮುಂದಾದಾಗ ಹೆದರಿದ ಮರಿ, ಕಿಟಕಿಯ ಮೂಲಕ ಹೊರಗೆ ಓಡಿ ಬಂದಿತು.
ಮರಿ ಹೊರಗೆ ಬರುತ್ತಿದ್ದಂತೆ ತಾಯಿ ಮಂಗ ಓಡೋಡಿ ಬಂದು ಅದನ್ನು ತನ್ನ ಮಡಿಲಿಗೆ ಬಿಗಿಯಾಗಿ ಅಪ್ಪಿಕೊಂಡಿತು. ಕ್ಷಣಮಾತ್ರದಲ್ಲಿ ತನ್ನ ಮಗುವನ್ನು ಎದೆಗಪ್ಪಿಕೊಂಡ ತಾಯಿ, ಅಲ್ಲಿಂದ ಓಡಿಹೋಗಿ ತನ್ನ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿತು.
ತನ್ನ ಕರುಳ ಕುಡಿಗಾಗಿ ಮನೆಯ ಮುಂದೆ ಗಂಟೆಗಟ್ಟಲೆ ಕಾದು ಕುಳಿತ ತಾಯಿ ಮಂಗದ ದೃಶ್ಯ ಕಂಡು ಸ್ಥಳೀಯರ ಕಣ್ಣುಗಳಲ್ಲೂ ನೀರು ತುಂಬಿತು. ಮನುಷ್ಯರ ಸಂಬಂಧಗಳಲ್ಲಿಯೇ ಮಮತೆ, ಕರುಣೆ ಹಾಗೂ ಬಂಧಗಳ ಬೆಲೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ, ಮೂಕ ಪ್ರಾಣಿಯೊಂದು ತೋರಿದ ಮಾತೃತ್ವದ ಈ ದೃಶ್ಯ ಎಲ್ಲರ ಮನಮುಟ್ಟುವಂತಿತ್ತು.
ಮನುಷ್ಯನಾಗಲಿ, ಮೂಕ ಪ್ರಾಣಿಯಾಗಲಿ… ತಾಯಿಯ ಹೃದಯ ಮಾತ್ರ ಒಂದೇ. ತನ್ನ ಮಗುವಿನ ಜೀವಕ್ಕಾಗಿ ಕಾದು ಕುಳಿತು, ಕೊನೆಗೆ ಮಡಿಲಿಗೆ ಸೇರಿಸಿಕೊಂಡ ತಾಯಿ ಮಂಗದ ಈ ಕರುಣಾಜನಕ ಘಟನೆ, ತಾಯಿಯ ಮಮತೆಗೆ ಸರಿಸಾಟಿಯೇ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾರಿದೆ.





















